ಕಿಡಿಗೇಡಿಗಳಿಂದ ಎರಡು ಹುಲ್ಲಿನ ಮೆದೆಗಳಿಗೆ ಬೆಂಕಿ

ಕೆ.ಆರ್.ಪೇಟೆ. ಮಾ.26: ಕಿಡಿಗೇಡಿಗಳ ಉದಾಸೀನತೆಗೆ ಅಕ್ಕಪಕ್ಕದ ಎರಡು ಹುಲ್ಲಿನ ಮೆದೆಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲ್ಲೂಕಿನ ಚಿಕ್ಕಳಲೆ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಚಿಕ್ಕಳಲೆ ಗ್ರಾಮದ ಗೌರಮ್ಮ ಲೇಟ್ ಶಿವೇಗೌಡ, ಮತ್ತು ಮಹೇಶ ಬಿನ್ ಲೇಟ್ ಮರೀಗೌಡ ಎಂಬುವವರಿಗೆ ಸೇರಿದ ಮೂರು ಎಕರೆ ಭತ್ತದ ಹುಲ್ಲನ್ನು ತಮ್ಮ ಜಮೀನಿನ ಬಳಿ ಅಕ್ಕಪಕ್ಕದಲ್ಲಿ ಮೆದೆ ಹಾಕಲಾಗಿತ್ತು. ಯಾರೋ ದಾರಿಹೋಕರು ಬೀಡಿ ಸೇದಿ ಎಸೆದಿರುವ ಪರಿಣಾಮ ಬೆಂಕಿಯು ಹುಲ್ಲಿನ ಮೆದೆಗಳಿಗೆ ಆವರಿಸಿದೆ. ಗ್ರಾಮಸ್ಥರು ಕೂಡಲೇ ಪಟ್ಟಣದ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿ ಶಿವಣ್ಣ ನೇತೃತ್ವದ ಪ್ರಮೋದ್, ಕುಮಾರಸ್ವಾಮಿ, ಶ್ರೀಕಾಂತ್ ಮುಂತಾದವರ ತಂಡ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು. ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಹುಲ್ಲಿನ ಮೆದೆಗಳು ಭಾಗಶ: ಬಲಿಯಾಗಿವೆ. ಈ ಬಗ್ಗೆ ರೈತರುಗಳಾದ ಮಹೇಶ್ ಮತ್ತು ಗೌರಮ್ಮ ಮಾತನಾಡಿ ಒಂದು ವರ್ಷದವರೆಗೆ ನಮ್ಮ ದನಕರುಗಳಿಗೆ ಹುಲ್ಲನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದು ತಲಾ 50 ಸಾವಿರ ಬೆಲೆಬಾಳುವ ಹುಲ್ಲು ಬೆಂಕಿಗೆ ಸುಟ್ಟುಹೋಗಿದ್ದು ಸರ್ಕಾರ ನಮಗೆ ಪರಿಹಾರ ಒದಗಿಸಿಕೊಡಬೇಕು ಎಂದು ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.