ಕಿಚ್ಚ ಸುದೀಪ್ ಗೆ ಬೆದರಿಕೆ ಪತ್ರ ಖದೀಮನ ಸೆರೆ

ಬೆಂಗಳೂರು, ಮೇ.5-ಸ್ಯಾಂಡಲ್ ವುಡ್ ಖ್ಯಾತ ನಟ ಕಿಚ್ಚ ಸುದೀಪ್ ಗೆ ಬೆದರಿಕೆ ಪತ್ರ ಬರೆದಿದ್ದ ಖದೀಮನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಹಲವು ದಿನಗಳಿಂದ ಆರೋಪಿ ರಮೇಶ್ ಕಿಟ್ಟಿಯ ಬೆನ್ನತ್ತಿದ್ದ ಪೊಲೀಸರು ಕೊನೆಗೂ ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದು
ಈ ಬೆದರಿಕೆ ಪತ್ರದ ಹಿಂದೆ ನಿರ್ದೇಶಕರೊಬ್ಬರ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಸುದೀಪ್ ಅವರ ಆತ್ಮೀಯರಾಗಿದ್ದ ರಮೇಶ್ ಕಿಟ್ಟಿ ಸುದೀಪ್ ಚಾರಿಟಬಲ್ ಟ್ರಸ್ಟ್ ನೋಡಿಕೊಳ್ಳುತ್ತಿದ್ದರು. ಸುದೀಪ್ ಮತ್ತು ರಮೇಶ್ ನಡುವಿನ ಹಣಕಾಸು ವೈಷಮ್ಯವೇ ಬೆದರಿಕೆ ಪತ್ರಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಸುದೀಪ್ ಚಾರಿಟಬಲ್ ಟ್ರಸ್ಟ್ ಮೇಲೆ ನಂಬಿಕೆ ಇಟ್ಟು ಎರಡು ಕೋಟಿ ಇನ್ವೆಸ್ಟ್ ಮಾಡಿದ್ದ ರಮೇಶ್ ಗೆ ಆನಂತರ ಸುದೀಪ್ ವಾಪಸ್ಸು ನೀಡಿಲ್ಲ ಎನ್ನುವ ಕಾರಣಕ್ಕೆ ಈ ರೀತಿಯಾಗಿ ಪತ್ರ ಬರೆದಿದ್ದಾರೆಂದು ಹೇಳಲಾಗುತ್ತಿದೆ.
ಹಣಕಾಸಿನ ವೈಷಮ್ಯವೇ ಬೆದರಿಕೆ ಪತ್ರಕ್ಕೆ ಕಾರಣವೆಂದು ಸ್ವತಃ ರಮೇಶ್ ಕಿಟ್ಟಿನೇ ಒಪ್ಪಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. ಅಲ್ಲದೇ, ಈ ಪ್ರಕರಣದ ಹಿಂದೆ ಇನ್ನೂ ಹಲವರು ಇದ್ದಾರೆಂದು ಶಂಕಿಸಲಾಗುತ್ತಿದೆ. ಬೆದರಿಕೆ ಪತ್ರದ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಮೊನ್ನೆಯಷ್ಟೇ ಸುದೀಪ್ ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಟ್ಟಿ ಬಂಧನವಾಗಿದೆ.