ಕಿಚ್ಚನ ಪ್ರಚಾರ ವಿರುದ್ಧ ಅವಹೇಳನ ಆರೋಪ: ರೊಚ್ಚಿಗೆದ್ದ ಸುದೀಪ್ ಅಭಿಮಾನಿಗಳು

ಚಾಮರಾಜನಗರ, ಏ.29- ಚುನಾವಣೆಯಲ್ಲಿ ಗಮನ ಸೆಳೆಯುತ್ತಿರುವ ಚಿತ್ರನಟ ಸುದೀಪ್ ಅವರ ಪ್ರಚಾರದ ಬಗ್ಗೆ ಮಾಜಿ ಶಾಸಕರ ಪುತ್ರ ಆಡಿದ ಮಾತೊಂದು ವೈರಲ್ಲಾಗಿದ್ದು ಸುದೀಪ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಕೊಳ್ಳೇಗಾಲ ಮಾಜಿ ಶಾಸಕ, ಕೈ ಮುಖಂಡ ಜಿ.ಎನ್.ನಂಜುಂಡಸ್ವಾಮಿ ಪುತ್ರ ಜಿ.ಎನ್.ಲೋಕೇಶ್ ಅವರು ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ವೀಡಿಯೋ ತುಣುಕೊಂದು ವೈರಲ್ಲಾಗಿದೆ. ಸುದೀಪ್ ಬರ್ತಾರೆ, ಅವರು ಬರ್ತಾರೆ, ಇವರು ಬರ್ತಾರೆ ಎಂದು ಶಾಸಕರು ಹೇಳುತ್ತಾರೆ, ಆದರೆ ನಮ್ಮಲ್ಲಿ ಯಾರೇ ಬಂದ್ರೂ ಊಟ ಮಾಡ್ತಾರೆ, ಜೇಬಿಗೆ ಹಾಕ್ಕೊಂಡ್ ಹೋಗ್ತಾರೆ ಅಷ್ಟೇ ಎಂದು ಹೇಳಿರುವ ಮಾತು ಈಗ ಸುದೀಪ್ ಅಭಿಮಾನಿಗಳನ್ನು ಆಕ್ರೋಶಿತರನ್ನಾಗಿ ಮಾಡಿದೆ.
ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷ ಸರಗೂರು ಶಿವು ಈ ಬಗ್ಗೆ ಮಾತನಾಡಿ, ಕಾಂಗ್ರೆಸ್ ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಮಾಜಿ ಶಾಸಕ ಜಿ. ಎನ್. ನಂಜುಂಡಸ್ವಾಮಿ ಪುತ್ರ ಜಿ.ಎನ್. ಲೋಕೇಶ್ ಮಾತಿನ ಭರದಲ್ಲಿ ಕಿಚ್ಚ ಸುದೀಪ್‍ರನ್ನು ವ್ಯಂಗ್ಯವಾಗಿ ಮಾತನಾಡಿರುವುದು ನಾಯಕ ಸಮಾಜಕ್ಕೆ ಮತ್ತು ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಬಹಳ ನೋವುಂಟಾಗಿದ್ದು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಜಿಲ್ಲಾದಾದ್ಯಂತÀ ಜಿ.ಎನ್. ಲೋಕೇಶ್ ವಿರುದ್ಧ ಪ್ರತಿಭಟಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು, ಯಳಂದೂರಿನಲ್ಲಿಯೂ ಸಹ ಸುದೀಪ್ ಅಭಿಮಾನಿಗಳು ಲೋಕೇಶ್ ವಿರುದ್ಧ ಘೋಷಣೆಗಳನ್ನು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ್ದಾರೆ.