ಕಿಕ್ ಬಾಕ್ಸಿಂಗ್:ಅಂತಾರಾಷ್ಟ್ರೀಯ ಸ್ಪರ್ಧೆಗೆ ಶರಣ್ಯ ಆಯ್ಕೆ

ತುಮಕೂರು, ಆ. ೫- ಪಶ್ಚಿಮ ಬಂಗಾಳದ ಸತ್ಯಜಿತ್ ರಾಯ್ ಇನ್‌ಡೊರ್ ಸ್ಟೇಡಿಯಂನಲ್ಲಿ ವ್ಯಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಷನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ವ್ಯಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ತುಮಕೂರಿನ ಸಿದ್ದಾರ್ಥ ನಗರದ ಶರಣ್ಯ (೧೨) ಎರಡನೇ ಸ್ಥಾನ ಪಡೆದು, ಬೆಳ್ಳಿ ಪದಕ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ತುಮಕೂರು ತಾಲ್ಲೂಕಿನ ಸಿದ್ದಾರ್ಥ ನಗರ(ಗೊಲ್ಲಹಳ್ಳಿ)ಯ ಕೃಷಿಕ ದಂಪತಿಗಳಾದ ಆನಂದಕುಮಾರ್ ಮತ್ತು ನಿರ್ಮಲ ಅವರ ಪುತ್ರಿ, ಊರುಕೆರೆಯ ಜೈನ್ ಪಬ್ಲಿಕ್ ಶಾಲೆಯಲ್ಲಿ ೭ನೇ ತರಗತಿಯಲ್ಲಿ ಕಲಿಯುತ್ತಿರುವ ಶರಣ್ಯ ಕಲ್ಕತ್ತಾ ನಗರದಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ೨೦೨೨ರ ಸೆಪ್ಟಂಬರ್ ೧೬-೨೫ರವರೆಗೆ ಐರ್ಲೆಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಓದು ಮತ್ತು ಬಾಕ್ಸಿಂಗ್ ಎರಡರಲ್ಲಿಯೂ ಮುಂದಿರುವ ಶರಣ್ಯ, ಒಂದನೇ ತರಗತಿಯಿಂದಲೇ ಸ್ವಯಂ ರಕ್ಷಣೆ ಮತ್ತು ಕ್ರೀಡೆಯಾಗಿ ಕರಾಟೆ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದು, ಕರಾಟೆಯಲ್ಲಿಯೂ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈಕೆಯ ಸಾಧನೆಯನ್ನು ಗಮನಿಸಿದ ಶರಣ್ಯ ಅವರ ತರಬೇತುದಾರರಾದ ರಂಗಸ್ವಾಮಿ, ಈಕೆಯನ್ನು ಕಿಕ್‌ಬಾಕ್ಸಿಂಗ್ ಕಲಿಯುವಂತೆ ಪ್ರೇರೆಪಿಸಿ, ಸ್ವತಃ ಅವರೇ ತರಬೇತಿ ನೀಡಿದ್ದರು.
ವ್ಯಾಕೋ ಇಂಡಿಯಾ ಕಿಕ್‌ಬಾಕ್ಸಿಂಗ್ ಸ್ಪೊರ್ಟ್ಸ್ ಅಸೋಸಿಯೇಷನ್ ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶರಣ್ಯ ಚಿನ್ನದ ಪದಕ ಹಾಗೂ ಬೆಳ್ಳಿ ಪದಕ ಪಡೆದಿದ್ದರು. ೨೦೨೨ರ ಜುಲೈ ೧೯-೨೩ರವರೆಗೆ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಶರಣ್ಯ ಅವರ ಪೋಷಕರು ಕೃಷಿ ಕುಟುಂಬದವರಾಗಿದ್ದು, ಮಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳುಹಿಸಲು ಪರದಾಡುತ್ತಿದ್ದ ಸಂದರ್ಭದಲ್ಲಿ ವಿಷಯ ತಿಳಿದ ಆದೇ ಗ್ರಾಮದ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಕರ್ನಾಟಕ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷರು ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರು ಎರಡು ಸ್ಪರ್ಧೆಗಳ ಪ್ರಯೋಜಕತ್ವವನ್ನು ವಹಿಸಿಕೊಂಡು, ಇಡೀ ಖರ್ಚುನ್ನು ವಹಿಸಿಕೊಂಡಿದ್ದಾರೆ. ಮುಂಬರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಪ್ರಯೋಜಕತ್ವ ನೀಡಿದ್ದಾರೆ.
ಶರಣ್ಯ ಅವರ ಕ್ರೀಡಾ ಸಾಧನೆಯನ್ನು ಮೆಚ್ಚಿ ಗೌರವಿಸಿರುವ ಡಾ.ಜಿ.ಪರಮೇಶ್ವರ್, ಈಕೆಯ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದ್ದಾರೆ.