ಕಲಬುರಗಿ,ಜು.15: ಅಪ್ರತಿಮ ಮಾಕ್ರ್ಸ್‍ವಾದಿ ಚಿಂತಕರು, ತತ್ವಜ್ಞಾನಿಗಳು ಹಾಗೂ ಭಾರತ ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಪಂಥಕ್ಕೆ ಸೇರಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಕಾ. ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವದ ವರ್ಷಾಚರಣೆಯನ್ನು ಕಾರ್ಯಕ್ರಮವನ್ನು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ವತಿಯಿಂದ ವಿಭಾಗ ಮಟ್ಟದಲ್ಲಿ ಜುಲೈ 16ರಂದು ಭಾನುವಾರ ನಗರದ ಎಸ್.ಎಮ್. ಪಂಡಿತ್ ರಂಗಮಂದಿರದಲ್ಲಿ ಬೃಹತ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡ ಎಸ್.ಎಂ. ಶರ್ಮಾ ಅವರು ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ನಗರದ ರೈಲ್ವೆ ನಿಲ್ದಾಣದಿಂದ ನೂರಾರು ಕಾರ್ಯಕರ್ತರೊಂದಿಗೆ ಪ್ರಾರಂಭವಾಗುವ ಮೆರವಣಿಗೆಯು ರಂಗಮಂದಿರದಲ್ಲಿ ಮುಕ್ತಾಯವಾಗಲಿದೆ. ನಂತರ ಅಲ್ಲಿಯೇ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಕಲಬುರ್ಗಿ, ವಿಜಯಪುರ, ಬೀದರ್, ಯಾದಗಿರ್ ಹಾಗೂ ರಾಯಚೂರು ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಖಿಲ ಭಾರತ ನಾಯಕರು ಹಾಗೂ ಕೇಂದ್ರ ಸಮಿತಿಯ ಪಾಲಿಟ್ ಬ್ಯುರೋ ಸದಸ್ಯ ಕಾ. ಕೆ. ರಾಧಾಕೃಷ್ಣ ಅವರು ಆಗಮಿಸುತ್ತಿದ್ದಾರೆ. ಅಲ್ಲದೆ ಪಕ್ಷದ ರಾಜ್ಯ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ಕಾರ್ಯದರ್ಶಿ ಕಾ. ಎಚ್.ವಿ. ದಿವಾಕರ್ ಅವರು ಭಾಷಣಕಾರರಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಎಸ್‍ಯುಸಿಐ (ಸಿ) ಪಕ್ಷದ ರಾಯಚೂರು ಜಿಲ್ಲಾ ಕಾರ್ಯದರ್ಶಿ ಕಾ. ಚಂದ್ರಗಿರೀಶ್ ಅವರು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ.