ಕಾಸರಗೋಡು ಜಿಲ್ಲೆಯಲ್ಲಿ ಲೈಸನ್ಸ್ ಪಡೆಯಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಕಾಸರಗೊಡು, ನ.೨೦- ವಾಹನ ಚಾಲನಾ ಲೈಸನ್ಸ್‌ಗೆ ಅರ್ಜಿ ಜೊತೆ ಕೋವಿಡ್ ನೆಗಟಿವ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ. ಸರ್ಟಿಫಿಕೇಟ್ ಹಾಜರುಪಡಿಸಿದವರಿಗೆ ಚಾಲನಾ ಲೈಸನ್ಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.

ಗುರುವಾರ ನಡೆದ ಕೊರೋನಾ ಸಲಹಾ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದರು. ಕಾಞಂಗಾಡ್ ಕಿಯಾಸ್ಕ್ ನಲ್ಲಿ ಉಚಿತ ಆಂಟಿಜನ್ ಟೆಸ್ಟ್ ಸೌಲಭ್ಯ ಕಲ್ಪಿಸಲಾಗಿದ್ದು, ಈ ಪರಿಸರದ ವರ್ತಕರು, ನೌಕರರು, ಚಾಲಕರು, ಸರಕಾರಿ ನೌಕರರು ೧೪ ದಿನಗಳಿಗೊಮ್ಮೆ ತಪಾಸಣೆಗೆ ಒಳಗಾಗಬೇಕು. ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಯಾಗಿರುವ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್, ಕ್ಲೀನಿಂಗ್ ಸ್ಟಾಫ್ ಮೊದಲಾದ

ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ನೇಮಿಸಲು ಜಿಲ್ಲಾ ವೈದ್ಯಾಧಿಕಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಇನ್ನು ಮುಕ್ತ ಮೈದಾನ, ಬೀಚ್ ಗಳಲ್ಲಿ ಆಟಕ್ಕೆ ಅನುಮತಿ ಇರುವುದಿಲ್ಲ. ಆದೇಶ ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯ ಅಂಗಡಿ ಮುಂಗಟ್ಟುಗಳು ರಾತ್ರಿ ೯ ಗಂಟೆ ತನಕ ತೆರೆಯಬಹುದು. ತಳ್ಳು ಗಾಡಿಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.