ಕಾಶ್ಮೀರ ವಿವಾದ ಕೆದಕಿದ ಪಾಕ್‌ಗೆ ಭಾರತ ತಿರುಗೇಟು

ನವದೆಹಲಿ/ ನ್ಯೂಯಾರ್ಕ್, ಮಾ.೯-ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪ ಮಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.
ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಮಹಿಳೆಯರು,ಮಕ್ಕಳು ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ.ಪಾಕಿಸ್ತಾನದ ವಿದೇಶಾಂಗ ಸಚಿವರು ಕಾಶ್ಮೀರ ವಿಷಯ ಪ್ರಸ್ತಾಪ ಮಾಡಿರುವುದು ಶಾಂತಿ ಮತ್ತು ಭದ್ರತೆಗೆ ಧಕ್ಕೆ ತುರವಂತಹುದು ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ರುಚಿರಾ ಕಾಂಬೋಜ್ ತಿರುಗೇಟು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರತಿನಿಧಿಮಾಡಿದ ಕ್ಷುಲ್ಲಕ, ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಟೀಕೆಗಳನ್ನು ತಳ್ಳಿಹಾಕುತ್ತೇನೆ” ಎಂದು ಅವರು ಹೇಳಿದ್ದಾರೆ.
ಕಣಿವೆ ಪ್ರದೇಶದಲ್ಲಿ ಮಹಿಳೆಯರ ಪ್ರಾಮುಖ್ಯತೆ, ಶಾಂತಿ ಮತ್ತು ಭದ್ರತಾಗೆ ಒತ್ತು ನೀಡಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ ಎಂದಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾದಿನದಂದು ಮೊಜಾಂಬಿಕ್ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಚರ್ಚೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಜರ್ದಾರಿ ಅವರು ಜಮ್ಮು ಮತ್ತು ಕಾಶ್ಮೀರವನ್ನು ಉಲ್ಲೇಖಿಸಿದ ನಂತರ ಕಾಂಬೋಜ್ ಅವರ ತೀಕ್ಷ್ಣವಾದ ಪ್ರತ್ಯುತ್ತರ ನೀಡಿದ್ದಾರೆ.
೨೦೧೯ ರಲ್ಲಿ ಪಾಕಿಸ್ತಾನದ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಭಾರತದ ಯುದ್ಧ ವಿಮಾನಗಳು ದಾಳಿ ಮಾಡಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ ಮತ್ತು ಆಗಸ್ಟ್ ೨೦೧೯ ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.