
ನವದೆಹಲಿ,ಆ.೩೧: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ಧವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಇಂದು ತಿಳಿಸಿದೆ. ಆದರೆ ಕೇಂದ್ರದ ಮಾಹಿತಿ, ರಾಜ್ಯ ಸ್ಥಾನಮಾನ ಮರುಸ್ಥಾಪನೆ ಕುರಿತು ನಿರ್ದಿಷ್ಠ ಸಮಯ ತಿಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಜಮ್ಮು-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ತಾತ್ಕಾಲಿಕ ಎಂದು ಇದೇ ಸಮಯದಲ್ಲಿ ಸುಪ್ರೀಂಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಲು ನಿಖರವಾದ ಅವಧಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ೩೭೦ ವಿಶೇಷಾಧಿಕಾರ ರದ್ಧತಿಯನ್ನು ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠಕ್ಕೆ ಭಾರತದ ಸಾಲಿಸಿಟರ್ ಜನರಲ್ ತುಷಾರ್‌ಮೆಹ್ತಾ ಸಂವಿಧಾನ ಪೀಠಕ್ಕೆ ಇಂದು ತಿಳಿಸಿದರು. ಈ ಹಿಂದೆ ವಿಚಾರಣೆ ನಡೆಸಿದ್ದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ವೈ.ಚಂದ್ರಚೂಡ ನೇತೃತ್ವದ ಪೀಠ ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು ಹಾಗೂ ಜಮ್ಮು-ಕಾಶ್ಮೀರದಲ್ಲಿ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಈ ಪ್ರದೇಶಗಳಲ್ಲಿ ಚುನಾವಣೆ ನಡೆಸಲು ನಿರ್ದಿಷ್ಟ ಸಮಯ ನೀಡುವಂತೆ ಕೇಂದ್ರ ಮನವಿ ಮಾಡಿತ್ತು ಮತ್ತು ಈ ಪ್ರದೇಶದಲ್ಲಿ ರಾಜ್ಯಸ್ಥಾನಮಾನ ಮರುಸ್ಥಾಪಿಸುವ ಸಂಬಂಧ ಅಗತ್ಯವಿರುವ ಉಪಕ್ರಮಗಳು ಪ್ರಗತಿಯಲ್ಲಿವೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಜಮ್ಮು-ಕಾಶ್ಮೀರ ಸಂಪೂರ್ಣ ರಾಜ್ಯ ಸ್ಥಾನಮಾನ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುವುದೆಂದು ನ್ಯಾಯಪೀಠಕ್ಕೆ ತಿಳಿಸಿತ್ತು. ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಇದುವರೆಗೂ ಮತದಾರರ ಪಟ್ಟಿಯ ನವೀಕರಣ ಪ್ರಗತಿಯಲ್ಲಿದೆ. ಬಹುತೇಕ ಮತಪಟ್ಟಿ ನವೀಕರಣ ಪ್ರಕ್ರಿಯೆ ಮುಗಿದಿದೆ. ಇನ್ನೂ ಕೆಲವು ಭಾಗಗಳಲ್ಲಿ ಪೂರ್ಣಗೊಳ್ಳಬೇಕಿದೆ. ಈ ಕುರಿತಂತೆ ಚುನಾವಣಾ ಆಯೋಗ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಎಸ್‌ಜಿ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗ ಮತ್ತು ಕೇಂದ್ರ ಚುನಾವಣಾ ಆಯೋಗ ಈ ಸಂಬಂಧ ಕಾರ್ಯನಿರ್ವಹಿಸುತ್ತಿದ್ದು, ಚುನಾವಣೆ ಮೂರು ಹಂತಗಳಲ್ಲಿ ನಡೆಯಬೇಕಿದೆ. ಪಂಚಾಯತ್, ಪುರಸಭೆ, ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಲ್ಹೇ ಹಿಲ್‌ನಲ್ಲಿ ಅಭಿವೃದ್ಧಿ ಸಮಿತಿ ಚುನಾವಣೆ ಮುಗಿದಿದೆ. ಸದ್ಯದಲ್ಲೆ ಕಾರ್ಗಿಲ್‌ನಲ್ಲಿ ಈ ಚುನಾವಣೆ ನಡೆಯಲಿದೆ ಎಂದು ಎಸ್‌ಜಿ ತಿಳಿಸಿದ್ದಾರೆ. ೨೦೧೬ರ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣ ಸುಧಾರಿಸಿದ್ದು, ಒಳ ನುಸುಳುವಿಕೆ, ಶೇ. ೯೦.೨೦ರಷ್ಟು ಕಡಿಮೆಯಾಗಿದೆ. ಕಾನೂನು ವ್ಯವಸ್ಥೆ ನಿರ್ವಹಣೆಯಾಗುತ್ತಿರುವುದರಿಂದ ಕಲ್ಲು ತೂರಾಟದಂತಹ ದುಷ್ಕೃತ್ಯಗಳು ಶೇ. ೯೨ ರಷ್ಟು ನಿಯಂತ್ರಿಸಲಾಗಿದೆ. ಭದ್ರತಾ ಸಿಬ್ಬಂದಿಗಳ ಸಾವು-ನೋವುಗಳು ಶೇ. ೬೯.೫ರಷ್ಟು ಕಡಿಮೆಯಾಗಿದೆ ಎಂದು ಎಸ್‌ಜೆ ವಿವರಣೆ ನೀಡಿದ್ದಾರೆ. ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಹೂಡಿಕೆಯನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಹಲವು ಯೋಜನೆಗಳು ಈ ಪ್ರದೇಶದಲ್ಲಿ ಆರಂಭವಾಗಿವೆ. ಈ ಬೆಳವಣಿಗೆಯಿಂದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆತಿದ್ದು, ಕಲ್ಲು ತೂರುವಂತಹ ದುಷ್ಕೃತ್ಯಗಳಿಂದ ದೂರ ಉಳಿದಿದ್ದಾರೆ ಎಂದು ಹೇಳಿದರು. ಜಮ್ಮು-ಕಾಶ್ಮೀರ ಪ್ರದೇಶವನ್ನು ಸ್ಥಿರಗೊಳಿಸುವ ಪ್ರಕ್ರಿಯೆಗಳು ಸಂಪೂರ್ಣ ಪ್ರಗತಿಯಲ್ಲಿವೆ. ಉಪಕ್ರಮಗಳನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಕೇಂದ್ರಾಡಳಿತ ಕಾರ್ಯನಿರ್ವಹಿಸುತ್ತಿದೆ. ಆದರೆ, ಈ ಭಾಗದ ಕೇಂದ್ರದ ಆಡಳಿತ ತಾತ್ಕಾಲಿಕವಾಗಿದ್ದು, ರಾಜ್ಯ ಸ್ಥಾನಮಾನ ಮರುಸ್ಥಾಪನೆಯಾಗಲಿದೆ ಎಂದು ತಿಳಿಸಿದ್ದಾರೆ. ೩೭೦ ರದ್ಧತಿ ಕುರಿತ ಅರ್ಜಿಗಳ ಪರ ವಕೀಲರಾದ ಕಪಿಲ್ ಸಿಬಲ್ ಕೇಂದ್ರದ ಹೇಳಿಕೆಗಳಿಗೆ ತಮ್ಮ ವಾದ ಮಂಡಿಸಿದ್ದಾರೆ. ಇಂಟರ್‌ನೆಟ್ ಸ್ಥಗಿತ, ಗೃಹ ಬಂಧನದಂತಹ ಬಲವಂತದ ಪ್ರಕ್ರಿಯೆಗಳ ಮೂಲಕ ಸಹಜತೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಯತ್ನಿಸಿದೆ ಎಂದು ತಿಳಿಸಿದ್ದರು.