
ದೆಹಲಿ, ಮಾ.೧೫- ಸದ್ಯ ಭಾರತೀಯ ಸ್ಟಾರ್ಟಪ್ ಕಂಪೆನಿಗಳಿಗೆ ಆಶಾಕಿರಣವಾಗಿ ಮೂಡಿರುವ ಶಾರ್ಕ್ ಟ್ಯಾಂಕ್ ಇಂಡಿಯಾ ರಿಯಾಲಿಟಿ ಶೋನಿಂದ ಹಲವಾರು ಕಂಪೆನಿಗಳು ಹಣಕಾಸಿನ ಪ್ರಯೋಜನ ಪಡೆದುಕೊಂಡಿದ್ದು, ಸದ್ಯ ಇದಕ್ಕೀಗ ಜಮ್ಮು ಕಾಶ್ಮೀರದ ಕಂಪೆನಿ ಕೂಡ ಸೇರ್ಪಡೆಯಾಗಿದೆ. ಈ ಮೂಲಕ ಶಾರ್ಕ್ ಟ್ಯಾಂಕ್ ಇಂಡಿಯಾ ಶೋನಲ್ಲಿ ಹಣಕಾಸಿನ ನೆರವು ಪಡೆದ ಕಾಶ್ಮೀರದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಾಶ್ಮೀರ ಮೂಲದ ಫಾಸ್ಟ್‌ಬೀಟಲ್ ಎಂಬ ಹೆಸರಿನ ಕೊರಿಯರ್ ಡೆಲಿವರಿ ಸಂಸ್ಥೆಯಲ್ಲಿ ಇದೀಗ ಶಾರ್ಕ್ ಟ್ಯಾಂಕ್ ಇಂಡಿಯಾ ರಿಯಾಲಿಟಿ ಶೋನಲ್ಲಿ ಸುಮಾರು ೯ ಲಕ್ಷ ರೂ. ಹೂಡಿಕೆ ಮಾಡಲು ಮುಂದಾಗಿದೆ. ಸಹಜವಾಗಿಯೇ ಇದರಿಂದ ಫಾಸ್ಟ್‌ಬೀಟಲ್ ಮಾಲಕರಾದ ಶೇಕ್ ಸಮೀವುಲ್ಲಾ ಹಾಗೂ ಅಕಿಬ್ ಜಾವೇದ್ ಸಂತಸಗೊಂಡಿದ್ದು, ಕಾಶ್ಮೀರದಲ್ಲಿನ ತಮ್ಮ ವ್ಯವಹಾರಗಳನ್ನು ಎಲ್ಲೆಡೆ ವಿಸ್ತರಿಸಲು ಮುಂದಾಗಿದ್ದಾರೆ. ಅದೂ ಅಲ್ಲದೆ ಕಳೆದ ಹಲವಾರು ವರ್ಷಗಳಿಂದ ನೆರೆಯ ಪಾಕಿಸ್ತಾನದ ಕುಮ್ಮಕ್ಕಿನಿಂದ ನಡೆಯುತ್ತಿದ್ದ ಭಯೋತ್ಪಾದನೆ ಚಟುವಟಿಕೆಗಳಿಂದ ನಲುಗಿದ್ದ ಜಮ್ಮು ಕಾಶ್ಮೀರದಲ್ಲಿ ಸದ್ಯ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸ್ಟಾರ್ಟಪ್ (ಹೊಸ ಕಂಪೆನಿ)ಗಳು ಅಸ್ತಿತ್ವಕ್ಕೆ ಬರುತ್ತಿದೆ. ಇನ್ನು ಲಿಂಕ್ಡ್‌ಇನ್ ಮೂಲಕ ಶಾರ್ಕ್ ಟ್ಯಾಂಕ್ ಇಂಡಿಯಾದ ಪ್ರದರ್ಶನದ ಜಾಹೀರಾತು ವೀಕ್ಷಿಸಿದ ಬಳಿಕ ಅರ್ಜಿ ಸಲ್ಲಿಸಿದ್ದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮ್ಮೀವುಲ್ಲಾ, ಜಮ್ಮು ಕಾಶ್ಮೀರದಲ್ಲಿ ನಮ್ಮನ್ನು ಬೆಂಬಲಿಸುವ ನಿಮ್ಮಂಥ (ಶಾರ್ಕ್ ಟ್ಯಾಂಕ್ ಶೋ ಜಡ್ಜ್) ಜನರಿಲ್ಲ. ಹಾಗಾಗಿ ಕಾಶ್ಮೀರದ ಜನರು ಕೇವಲ ಉದ್ಯೋಗದ ಮೇಲೆ ಅವಲಂಬಿತರಾಗಿದ್ದಾರೆ. ಸದ್ಯ ನಾವೀಗ ಪಡೆಯುತ್ತಿರುವ ಹಣಕಾಸಿನ ನೆರವು ಮುಂದೆ ಭವಿಷ್ಯದಲ್ಲಿ ಕಾಶ್ಮೀರದಲ್ಲಿ ಹೆಚ್ಚಿನ ಯುವಜನರನ್ನು ತಮ್ಮ ಸ್ವಂತ ವ್ಯವಹಾರಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಏನಿದು ಶಾರ್ಕ್ ಟ್ಯಾಂಕ್ ಶೋ?
ಸದ್ಯ ಭಾರತದಲ್ಲಿ ಹಲವಾರು ಹಾಡುಗಾರಿಕೆ, ನೃತ್ಯಕ್ಕೆ ಸಂಬಂಧಿಸಿದ ಶೋ ಇದ್ದ ಹಾಗೆ ಶಾರ್ಕ್ ಟ್ಯಾಂಕ್ ಇಂಡಿಯಾ ಸ್ಟಾರ್ಟಪ್‌ಗಳಿಗೆ ಹಣಕಾಸಿನ ನೆರವು ಒದಗಿಸುವ ರಿಯಾಲಿಟಿ ಶೋ ಆಗಿದೆ. ಇಲ್ಲಿ ಹಲವಾರು ವಿವಿಧ ಕಂಪೆನಿಗಳ ಮಾಲೀಕರು ಬಂದು ತಮ್ಮ ಉತ್ಪನ್ನ ಅಥವಾ ಸೇವೆಗಳ ಬಗ್ಗೆ ಮಾಹಿತಿ ನೀಡಿ, ಹೂಡಿಕೆಗಾಗಿ ಶೋನ ಜಡ್ಜ್‌ಗಳ ಮನವೊಲಿಸುತ್ತಾರೆ. ಈಗಾಗಲೇ ಹೆಚ್ಚಿನ ಕಂಪೆನಿಗಳು ಶೋನಿಂದ ಹಣಕಾಸಿನ ಹೂಡಿಕೆ ಪಡೆದುಕೊಂಡಿದ್ದು, ಇದೀಗ ಕಾಶ್ಮೀರದ ಕಂಪೆನಿಗೂ ಹೂಡಿಕೆ ಸಿಕ್ಕಿದೆ. ಸದ್ಯ ಇದರಿಂದ ಪ್ರೇರಣೆಗೊಳಗಾಗಿ ಕಾಶ್ಮೀರದ ಯುವಜನತೆ ಸ್ಟಾರ್ಟಪ್ ಪ್ರಾರಂಭಿಸಿ, ಹಲವಾರು ಮಂದಿಗೆ ಉದ್ಯೋಗ ನೀಡುವ ಆಶಾಕಿರಣ ವ್ಯಕ್ತವಾಗಿದೆ.