ಕಾಶಿ ಜಗದ್ಗುರು ಪೀಠದಿಂದ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನಕಳೆದ 15 ವರ್ಷಗಳಿಂದ 10 ಸಾವಿರಕ್ಕೂ ಅಧಿಕ ಅರ್ಹ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿಕೆ

ಕಲಬುರಗಿ,ಸೆ.13: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಉತ್ತರಪ್ರದೇಶದ ಶ್ರೀಕಾಶಿ ಜ್ಞಾನ ಸಿಂಹಾಸನ ಜಗದ್ಗುರು ಪೀಠವು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲು ಶಿಷ್ಯವೇತನ ಯೋಜನೆಯನ್ನು ಜಾರಿಗೆ ತಂದಿದ್ದು, ಕಳೆದ 15 ವರ್ಷಗಳಿಂದ ಸುಮಾರು 10 ಸಾವಿರಕ್ಕೂ ಅಧಿಕ ಅರ್ಹ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರಕಟಿಸಿದ್ದಾರೆ.
ತಾವು ವಿದ್ಯಾರ್ಥಿಯಾಗಿದ್ದಾಗ ವ್ಯಾಸಂಗದ ಸಂದರ್ಭದಲ್ಲಿ ತಾವು ಅನೇಕ ವಿಧದ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದು, ಸಮಾಜದ ದಾನಿಗಳಿಂದ ಸಹಾಯ ಪಡೆದು ಪಿ.ಎಚ್‍ಡಿ. ಉಚ್ಚ ಪದವಿ ವಿಭೂಷಿತರಾಗಿದ್ದನ್ನು ಸದಾ ಸ್ಮರಣೆಯಲ್ಲಿ ಇಟ್ಟುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಬಡ-ಪ್ರತಿಭಾವಂತ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲು ಶಿಷ್ಯವೇತನ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದಿದ್ದಾರೆ.
ಭಕ್ತಗಣದ ಕಾಣಿಕೆ ಮೀಸಲು : ವಿವಿಧ ರಾಜ್ಯಗಳಲ್ಲಿ ಜರುಗಿದ ಧಾರ್ಮಿಕ ಸಮಾರಂಭಗಳು ಹಾಗೂ 2007ರಲ್ಲಿ ಜರುಗಿದ ತಮ್ಮ ಷಷ್ಠ್ಯಬ್ದಿಪೂರ್ಣ ಸಮಾರಂಭದಲ್ಲಿ ಭಕ್ತಗಣ ನೀಡಿದ ಗುರುಕಾಣಿಕೆಯ ಸಂಪೂರ್ಣ ಹಣವನ್ನು ಹಾಗೂ ಪ್ರಸಕ್ತ ವರ್ಷದ ಶ್ರಾವಣ ಮಾಸದ ತಪೋನುಷ್ಠಾನದ ಸಂದರ್ಭದಲ್ಲಿ ಸಂಗ್ರಹವಾದ ಒಟ್ಟು 16 ಲಕ್ಷ ರೂಪಾಯಿಗಳ ಗುರು ಕಾಣಿಕೆ ಈ ಶಿಷ್ಯವೇತನ ಯೋಜನೆಗೆ ಮೀಸಲಿರಿಸಲಾಗಿದೆ. ಇದರ ಬಡ್ಡಿ ಹಣದಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಆರಂಭಿಸಲಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ ವರ್ಷಕ್ಕೆ 12 ಸಾವಿರ ರೂಪಾಯಿಯಂತೆ ಅವರ ವಿದ್ಯಾರ್ಜನೆಯ ವ್ಯಾಸಂಗ ಪ್ರಕ್ರಿಯೆ ಸಂಪನ್ನಗೊಳ್ಳುವವರೆಗೆ ಈ ಶಿಷ್ಯವೇತನ ಕೊಡಲಾಗುತ್ತಿದೆ.
ಮಹಾರಾಷ್ಟ್ರದ 8 ಜನ ಶ್ರೀಮಂತ ಸದ್ಭಕ್ತರು ಈ ಶಿಷ್ಯವೇತನ ಯೋಜನೆಗೆ ಸ್ಪಂದನೆ ನೀಡಿ ಪ್ರತಿ ವರ್ಷ ಒಬ್ಬ ಬಡ ವಿದ್ಯಾರ್ಥಿಗೆ 12 ಸಾವಿರ ರೂ.ಗಳ ಶಿಷ್ಯವೇತನ ನೀಡಲು ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಶಿಷ್ಯವೇತನ ಯೋಜನೆಯನ್ನು ನಿರಂತರವಾಗಿ ಮುಂದುವರೆಸಲು ಕಾಶಿ ಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಬಹಳಷ್ಟು ಆಸಕ್ತಿಯನ್ನು ಹೊಂದಿದ್ದು, ಅವರೂ ಸಹ ಈ ಯೋಜನೆಯ ಶಾಶ್ವತ ನಿಧಿಗೆ ಭಕ್ತರ ಕಾಣಿಕೆಯ ಹಣ ಸೇರಿಸುವುದಾಗಿ ಭರವಸೆ ನೀಡಿದ್ದಾರೆ.
ಅರ್ಜಿ ಸಲ್ಲಿಕೆ ವಿಧಾನ : ಮೆಡಿಕಲ್ ಹಾಗೂ ಇಂಜನೀಯರಿಂಗ್ ಪದವಿಯ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಮತ್ತು ಅತೀ ಕಡು ಬಡತನದ ಇತರೇ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ತಮ್ಮ ಭಾಗದ ಓರ್ವ ವೀರಶೈವ ಮಠಾಧೀಶರ ಶಿಫಾರಸ್ಸು ಪತ್ರ ಪಡೆದುಕೊಂಡು ತಮ್ಮ ಸ್ವವಿವರಗಳೊಂದಿಗೆ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಬೇಕು. ಕಾರ್ಯದರ್ಶಿ, ಶ್ರೀ ಜಗದ್ಗುರು ವಿಶ್ವಾರಾಧ್ಯ ಜ್ಞಾನ ಸಿಂಹಾಸನ ಮಹಾಪೀಠ, ಜಂಗಮವಾಡಿ ಮಠ, ವಾರಣಾಸಿ – 221001 (ಉತ್ತರಪ್ರದೇಶ) ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.