ಕಾಶಿ ಕಾರಿಡಾರ್ ಉದ್ಘಾಟನೆ ಒಂದು ತಿಂಗಳು ಸಂಭ್ರಮಾಚರಣೆ

ಲಖನೌ,ನ.೨೭- ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ನೇತೃತ್ವದ ಸರ್ಕಾರ ವಾರಣಸಿಯಲ್ಲಿ ಕಾಶಿವಿಶ್ವನಾಥ್ ಕಾರಿಡಾರ್ ಉದ್ಘಾಟನೆಯಾದ ನಂತರ ಒಂದು ತಿಂಗಳ ಕಾಲ ಅದ್ಧೂರಿ ಸಂಭ್ರಮಾಚರಣೆಗೆ ಮುಂದಾಗಿದೆ.
ಡಿ. ೧೩ ರಂದು ಪ್ರಧಾನಿ ನರೇಂದ್ರಮೋದಿ ಅವರು ಕಾಶಿವಿಶ್ವನಾಥ್ ಕಾರಿಡಾರ್‌ನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಡಿ. ೧ ರಿಂದ ಕಾಶಿವಿಶ್ವನಾಥ ದೇವಾಲಯಕ್ಕೆ ಭಕ್ತರು ಭೇಟಿ ಕೊಡುವುದನ್ನು ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಗಲಿರುಳು ಉಳಿದಿರುವು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿದೆ.
ಪ್ರಧಾನಮಂತ್ರಿ ನರೇಂದ್ರಮೋದಿ ಪ್ರತಿನಿಧಿಸುವ ವಾರಣಸಿ ಲೋಕಸಭಾ ಕ್ಷೇತ್ರಕ್ಕೆ ಡಿ. ೧೩ ರಿಂದ ಮೂರು ದಿನಗಳ ಕಾಲ ಭೇಟಿ ನೀಡಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಡಿ. ೧೫ ರಂದು ಮುಖ್ಯಮಂತ್ರಿಗಳ ಸಮಾವೇಶವನ್ನು ಆಯೋಜಿಸಲಾಗಿದೆ. ಅಂದು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.
ಡಿ. ೨೦ ರಂದು ಕಾಶಿವಿಶ್ವನಾಥ್ ಕಾರಿಡಾರ್‌ನಲ್ಲಿ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿದೆ. ಮುಂಬರುವ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ಈ ಕಾರಿಡಾರ್ ಯೋಜನೆ ಸರ್ಕಾರಕ್ಕೆ ಮಹತ್ವದ್ದಾಗಿದೆ.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ವಾರಣಸಿ ಅಭಿವೃದ್ಧಿಯ ಸಾಧನೆಯನ್ನು ಬಿಂಬಿಸಲು ಬಿಜೆಪಿ ತೀರ್ಮಾನಿಸಿದೆ.