ಕಾವ್ಯ ಹೃದಯದ ಭಾಷೆ

ತುಮಕೂರು, ನ. ೧೦- ಕಾವ್ಯ ಹೃದಯದ ಭಾಷೆ, ಕಾವ್ಯದ ಮೂಲಕವೇ ಪರಸ್ಪರ ಮನಸ್ಸು-ಸಮಾಜ ಕಟ್ಟುವ ಕೆಲಸ ಮಾಡಬಹುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಮತ್ತು ತಾಲ್ಲೂಕು ಕಸಾಪದ ವತಿಯಿಂದ ಇಷ್ಟ ಪ್ರಕಾಶನ ಹೊರತಂದಿರುವ ಹೊದೇಕಲ್ ರಚನೆಯ ನೋವು ಒಂದು ಹೃದ್ಯ ಕಾವ್ಯ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯದಲ್ಲಿ ಹೆಚ್ಚು ಕೃತಿ ಪ್ರಕಟಣೆ, ದೀರ್ಘ ಸಾಲುಗಳ ಬರವಣಿಗೆ ಮುಖ್ಯವಲ್ಲ.
ಕಡಿಮೆ ಶಬ್ದಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸುವುದು ಮುಖ್ಯ. ಈ ದಿಸೆಯಲ್ಲಿ ಬದುಕಿನ ಪ್ರೀತಿ ತೋರುವ ಕಾವ್ಯ ಹೊದೇಕಲ್ ಅವರ ಹೃದ್ಯ ಕಾವ್ಯ ಸಂಕಲನ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗವಾಗಿ ವಿಭಿನ್ನವಾಗಿ ಮೂಡಿಬಂದಿದೆ ಎಂದು ಬಣ್ಣಿಸಿದರು.
ಕೊರೊನಾ ಕಾಲಘಟ್ಟದಲ್ಲಿ ಮನುಷ್ಯರ ಮಿತಿಗಳೇನು? ಗುರಿ ಏನಾಗಿರಬೇಕು ಎಂಬುದನ್ನು ಪ್ರಕೃತಿ ಅರ್ಥ ಮೂಡಿಸಿದೆ. ನಮ್ಮ ಸಂಸ್ಕೃತಿ, ಮಾನವೀಯತೆ ಮರೆತು ದುಡ್ಡಿನ ಶ್ರೀಮಂತಿಕೆಯಲ್ಲಿ ಹೋಗುತ್ತಿದ್ದ ಜಗತ್ತಿನ ವೇಗಕ್ಕೆ ಬ್ರೇಕ್ ಹಾಕಿದೆ. ನೆಲಮೂಲ ಸಂಸ್ಕೃತಿಯನ್ನು ಉಳಿಸುವ ಅಗತ್ಯತೆಯನ್ನು ಕೊರೊನಾ ಕಾಲಘಟ್ಟ ನಮಗೆ ಸಾರಿ ಹೇಳಿದ್ದು, ಸೋಂಕಿತ ಅಟ್ಟಹಾಸದ ಸಂದರ್ಭದಲ್ಲೂ ಕಾವ್ಯ, ಗದ್ಯದಲ್ಲಿ ಅಮೂಲ್ಯ ಸಾಹಿತ್ಯ ಪ್ರಕಾರಗಳು ಹೊರ ಬಂದಿದ್ದು, ನೊಂದವರ ಧ್ವನಿಯಾಗಿಯೂ ಹೊರ ಹೊಮ್ಮಿದೆ. ಹೃದಯಗಳ ಬೆಸೆಯುವಿಕೆಯೇ ಕಾವ್ಯ ಸಂವೇದನೆಯಾಗಿದೆ ಎಂದು ಅವರು ಹೇಳಿದರು.
ತುಮಕೂರು ವಿ.ವಿ. ಪ್ರಾಧ್ಯಾಪಕಿ ಡಾ. ಗೀತಾ ವಸಂತ್, ಉಪನ್ಯಾಸಕರಾದ ವಿ.ಜಿ. ಗಂಗಹನುಮಯ್ಯ ಅವರು ಕಾವ್ಯ ಪ್ರಜ್ಞೆ, ಕವಲ ಸಂಕಲನದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷೆ ಶೈಲಾ ನಾಗರಾಜು ಆಶಯ ನುಡಿಗಳನ್ನಾಡಿದರು.
ಕವಯತ್ರಿ ರಂಗಮ್ಮ ಹೊದೇಕಲ್ ಮಾತನಾಡಿ, ಕವನ ಸಂಕಲನ ಹೊರ ತರಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ನೋವಿನ ಕಹಿಯ ಲಿಪಿ ರೂಪ ನನ್ನ ಕವನ ಸಂಕಲನ ಎಂದರು.
ಕಾರ್ಯಕ್ರಮದಲ್ಲಿ ಪಾರ್ವತಮ್ಮ ರಾಜಕುಮಾರ್, ಗಂಗಲಕ್ಷ್ಮೀ ಗೀತೆಗಳನ್ನು ಹಾಡಿದರು.