ಕಾವ್ಯ ಮತ್ತು ತತ್ವಜ್ಞಾನ ಕುವೆಂಪು ಸಾಹಿತ್ಯದ ಜೀವಾಳ: ರೇವಣಸಿದ್ಧಪ್ಪ ದೊರೆಗಳ್

ಬಸವಕಲ್ಯಾಣ:ಡಿ.30:ಕಾವ್ಯ ಮತ್ತು ತತ್ವಜ್ಞಾನ ಕುವೆಂಪು ಸಾಹಿತ್ಯದ ಜೀವಾಳವಾಗಿವೆ. ಪ್ರಕೃತಿ ದರ್ಶನ ಮತ್ತು ಮಾನವೀಯತೆ ಕುವೆಂಪು ಸಾಹಿತ್ಯದ ತಾತ್ವಿಕತೆಯಾಗಿದೆ ಎಂದು ಸರಕಾರಿ ಪಿಯು ಕಾಲೇಜು ಉಪನ್ಯಾಸಕ ರೇವಣಸಿದ್ಧಪ್ಪ ದೊರೆಗಳ್ ಹೇಳಿದರು.
ನಗರದ ಅಲ್ಲಮಪ್ರಭು ಪದವಿ ಕಾಲೇಜಿನಲ್ಲಿ ಮಂಳವಾರ ಏರ್ಪಡಿಸಿದ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ 51 ನೇ ಉಪನ್ಯಾಸ ಮಾಲಿಕೆ ಹಾಗೂ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ಕುವೆಂಪು ಮತ್ತು ವಿಚಾರವಾದದ ಕುರಿತು ಮಾತನಾಡಿದ ಅವರು ಕುವೆಂಪು ಅವರು ಕವಿಯಾಗುವುದಕ್ಕಿಂತ ಬಹುದೊಡ್ಡ ತತ್ವ ಜ್ಞಾನಿಯಾಗಿದ್ದರು. ವಸಾಹತುಶಾಹಿ ಕಾಲಕ್ಕೆ ಓದು-ಅಧ್ಯಯನ ಮಾಡಿದ ಕುವೆಂಪು, ಕನ್ನಡತ್ವ, ಭಾರತೀಯತೆ ಮತ್ತು ವಿಶ್ವಮಾನವ ತತ್ವವನ್ನು ತಮ್ಮ ಬರಹದ ಮೂಲಕ ಪ್ರತಿಪಾದಿಸಿದರು. ಸಮಾಜದಲ್ಲಿನ ಮೌಢ್ಯ ಕಂದಾಚಾರಗಳನ್ನು ಕಟುವಾಗಿ ವಿರೋಧಿಸಿ ವಿಚಾರ ಕ್ರಾಂತಿಗೆ ಆಹ್ವಾನಿಸಿದ ಚಿಂತಕರಾಗಿದ್ದಾರೆ.
ಕುವೆಂಪು ಅವರ ಕವಿತೆ ಮತ್ತು ಲೇಖನಗಳು ವೈಚಾರಿಕ ಪ್ರಜ್ಞೆ, ತತ್ವಶಾಸ್ತ್ರೀಯ ಹಿನ್ನೆಲೆಯಲ್ಲಿ ರೂಪಿತವಾಗಿವೆ. ಮನುಷ್ಯ ಹುಟ್ಟುತ್ತಲೇ ವಿಶ್ವಮಾನವ. ಸುತ್ತಲಿನ ಪರಿಸರದಿಂದ ಸಂಕುಚಿತಗೊಳುತ್ತಾನೆ. ಮತ್ತೆ ಮನುಷ್ಯನಲ್ಲಿ ವಿಶ್ವಮಾನವ ಪ್ರಜ್ಞೆ ನೆಲೆ ನಿಲ್ಲಬೇಕು. ದಾಸ್ಯದಿಂದ ಮುಕ್ತಿ ಹೊಂದಬೇಕು ಎಂಬುವುದು ಕುವೆಂಪು ಚಿಂತನೆಯ ತಾತ್ವಿಕತೆಯಾಗಿದೆ.
ಕನ್ನಡದಲ್ಲಿ ಎಲ್ಲವೂ ಇದೆ ಎಂಬ ಸಕಾರಾತ್ಮಕ ಮನೋಭಾವ ಬೆಳೆಸಿದ ಕವಿ ಕುವೆಂಪು ಆಗಿದ್ದಾರೆ. ವಿಚಾರಕ್ರಾಂತಿಗೆ ಆಹ್ವಾನ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಮನುಜಮತ ವಿಶ್ವಪಥ ಈ ಮೂರು ಕೃತಿಗಳು ಭಾರತೀಯ ವೈಚಾರಿಕ ಲೋಕದ ಬಹುದೊಡ್ಡ ಕೃತಿಗಳಾವೆ. ಈ ಕೃತಿಗಳ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿದ ಮತ್ತು ಪ್ರಶ್ನಿಸುವ ಪ್ರಜ್ಞೆ ಬೆಳೆಸುವ ಸಾಹಿತ್ಯ ಕೃತಿಗಳಾಗಿವೆ ಎಂದರು.
ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ವಿಶ್ವ ಮಾನವ-ಪ್ರಜ್ಞೆ, ಪ್ರಕೃತಿಪ್ರೇಮ, ನುಡಿಪ್ರಜ್ಞೆ, ರಾಷ್ಟ್ರೀಯತೆ ಮತ್ತು ಕನ್ನಡ ರಾಷ್ಟ್ರೀಯತೆಗಳು ಕುವೆಂಪು ಕಾವ್ಯಗಳಲ್ಲಿ ಅಡವಾಗಿವೆ. ಮಲೆನಾಡಿನ ಜಮೀನುದಾರಿ ಪದ್ಧತಿ, ಹೆಣ್ಣಿನ ಬದುಕು, ವಸಾಹತುಶಾಹಿ, ಆಧುನಿಕತೆಯನ್ನು ಎದುರಿಸುವ ವಿಧಾನಗಳು, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿಗಳಲ್ಲಿ ನೆಲೆಗೊಂಡಿವೆ. ಮೌಢ್ಯ ಕಂದಾಚಾರ ವಿರೋಧಿಸುವ, ಸಾಮಾಜಿಕ ಸಂಕೀರ್ಣತೆ ಮೀರುವ ಚಿಂತನೆಗಳು ಅವರ ವೈಚಾರಿಕ ಬರಹಗಳಲ್ಲಿ ಅಡವಾಗಿವೆ. ಕಾವ್ಯಮೀಮಾಂಸೆ, ರಸ ಸಿದ್ಧಾಂತ, ದರ್ಶನ, ತತ್ವಶಾಸ್ತ್ರ, ಕುವೆಂಪು ವಿಮರ್ಶೆಯ ತಾತ್ವಿಕತೆಯಾಗಿವೆ ಎಂದರು.
ಚಂದ್ರಕಾಂತ ಅಕ್ಕಣ್ಣಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವಿಂದ್ರ ಬರಗಾಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಿಯಾಂಕಾ ಮಡಕೆ ನಿರೂಪಿಸಿದರು. ಶಹಾನವಾಜ್ ಶೇಖ್ ವಂದಿಸಿದರು.