ಕಾವ್ಯಕ್ಕೆ ಸಿದ್ಧ ಸೂತ್ರಗಳಿಲ್ಲ ಅದು ಸಹಜ ಭಾವಾಭಿವ್ಯಕ್ತಿ – ಬಿ.ಆರ್.ಲಕ್ಷ್ಮಣ್‍ರಾವ್

ಬಳ್ಳಾರಿ ಜ 13 : ಕವಿಯ ಪ್ರತಿಭೆ ಮತ್ತು ಪರಿಶ್ರಮಗಳೇ ಕವಿತೆಯ ಜನನಕ್ಕೆ ಕಾರಣಕ್ಕೆ. ಅಂಡಾಣು ಪ್ರತಿಭೆಯಾದರೆ, ಲಕ್ಷ ಲಕ್ಷ ವೀರ್ಯಾಣು ಪರಿಶ್ರಮ. ಇವರೆಡರ ಮಿಲನವೇ ಕವಿತೆಯ ಜನನ ಎಂದು ಬೆಂಗಳೂರಿನ ಪ್ರಸಿದ್ಧ ಕವಿ ಬಿ.ಆರ್.ಲಕ್ಷ್ಮಣರಾವ್ ಮಾರ್ಮಿಕವಾಗಿ ನುಡಿದರು.
ಅವರು ನಿನ್ನೆ ನಗರದ ಪೊಲೀಸ್ ಜಿಮ್ಖಾನದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು ಆಯೋಜಿಸಿದ್ದ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸಿದ್ಧ ಸೂತ್ರದಿಂದ ಕಾವ್ಯ ಹುಟ್ಟುವುದಿಲ್ಲ. ಅದು ಸಹಜ ಭಾವಾಭಿವ್ಯಕ್ತಿ. ಕವಿತೆಗಾಗಿ ಕವಿ ಬಹುದಿನ ಕಾಯಬೇಕು. ಕಾವ್ಯ ಪ್ರಪಂಚದಲ್ಲಿ ಕವಿ ಬ್ರಹ್ಮನಾದರೆ ಕವಿತೆ ಸರಸ್ವತಿ. ಪ್ರತಿ ವ್ಯಕ್ತಿಯಲ್ಲೂ ಒಬ್ಬ ಕವಿ ಇದ್ದಾನೆ. ಕವಿತೆಗೆ ಒಂದು ಆಶಯ ಆಕೃತಿ ಬಹುಮುಖ್ಯ. ಅದನ್ನು ಬಳಸಿಕೊಂಡು ಕಾವ್ಯ ರಚಿಸಿದಾಗ ಅದು ಸಮಾಜದ ಬಹುಜನರನ್ನು ತಲುಪಲು ಸಾಧ್ಯ ಎಂದು ಹೇಳುವ ಮೂಲಕ ಕಾವ್ಯ ಕಟ್ಟುವ ತಂತ್ರವನ್ನು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 25ಕ್ಕೂ ಹೆಚ್ಚು ಕವಿಗಳು ತಮ್ಮ ಕವನವನ್ನು ವಾಚಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ಮೃತ್ಯುಂಜಯ ರುಮಾಲೆ ಅವರು ಕವಿಗಳ ಕವಿತೆಗಳನ್ನು ವಿಮರ್ಶಿಸುವುದರ ಜೊತೆಗೆ, ಕವಿ ಕವಿತೆಯ ಜೊತೆಗೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕು ಎಂಬುದನ್ನು ವಿವರಿಸಿ ಕವಿಯಾದವನು ಓದುಗ ತನ್ನ ಕವಿತೆಯನ್ನು ಹೇಗೆ ಸ್ವೀಕರಿಸುತ್ತಾನೆ. ಕವಿತೆ ಓದುಗನಿಗೆ ಕೊಟ್ಟ ಲಾಭ ಏನು ಎಂಬುದರ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.
ಪತ್ರಕರ್ತ ಹೆಚ್.ಎಂ.ಮಹೇಂದ್ರಕುಮಾರ್, ಕಾರ್ಮಿಕ ಮುಖಂಡ ಹಂಪೇರು ಆಲೇಶ್ವರಗೌಡರು ಮಾತನಾಡಿದರು. ಸಮಾಜಸೇವಕ, ರಮೇಶ್‍ಬುಜ್ಜಿ, ಜನಕಲ್ಯಾಣ ರಕ್ಷಣಾ ವೇದಿಕೆ ಅಧ್ಯಕ್ಷ ಜೆ.ಎಂ.ಬಸವರಾಜಸ್ವಾಮಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಸಾಪ ಅಧ್ಯಕ್ಷ ಸಿದ್ದರಾಮ ಕಲ್ಮಠ ಆಶಯ ನುಡಿಗಳನ್ನಾಡಿ ಐದು ವರ್ಷಗಳ ಕಾಲ ನಿರಂತರವಾಗಿ ನಡೆದ ಕನ್ನಡ ಕಾರ್ಯಕ್ರಮಗಳನ್ನು ಕುರಿತು ಮೆಲುಕು ಹಾಕಿದರು. ಕುಮಾರಿ ವಿಭಾ ಕುಲಕರ್ಣಿ ಸುಶ್ರಾವ್ಯವಾಗಿ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಕಸಾಪ ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ ಸ್ವಾಗತಿಸಿದರು. ದಿವಾಕರ ನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಗೌರವ ಕಾರ್ಯದರ್ಶಿ ವೀರೇಶ್ ಕರಡಕಲ್ ವಂದಿಸಿದರು.
ಭಾಗವಹಿಸಿದ ಕವಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಲಾಯಿತು.