ಕಾವೇರಿ ಹೋರಾಟ: ರೈತ ಮಹಿಳೆಯರ ಉಪವಾಸ

ಸಂಜೆವಾಣಿ ವಾರ್ತೆ
ಮಂಡ್ಯ: ಡಿ.10:- ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿರಂತರ ಅನ್ಯಾಯ ಆಗುತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸರದಿ ಉಪವಾಸವನ್ನ ರೈತ ಮಹಿಳೆಯರು ಬೆಂಬಲಿಸಿದರು.
ನಗರದ ಸರ್.ಎಂ.ವಿ.ಪ್ರತಿಮೆ ಎದುರು 15ನೇ ದಿನದ ಉಪವಾಸದಲ್ಲಿ ಗೆಜ್ಜಲಗೆರೆಯ ರೈತ ಮಹಿಳೆಯರಾದ ಪ್ರಭಾವತಿ ವೀರಪ್ಪ, ಕೋಕಿಲ, ವಾಣಿ, ಜಿ.ಪಿ. ಕಲ್ಪನಾ, ಲಿಂಗಮ್ಮ, ಅಶ್ವಿನಿ ಚಂದ್ರಶೇಖರ್, ಸುಕನ್ಯ, ಎಸ್.ಎಲ್. ಅಶ್ವಿನಿ, ಮಾನಸ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.
ಕೃಷ್ಣರಾಜಸಾಗರದಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ಸ್ಥಗಿತ ಮಾಡಬೇಕು, ಮೇಕೆದಾಟು ಯೋಜನೆ ಜಾರಿ ಮಾಡಬೇಕು, ಕಾವೇರಿ ಸಂಕಷ್ಟ ಸನ್ನಿವೇಶದಲ್ಲಿ ನ್ಯಾಯ ದೊರಕಿಸಿಕೊಡಲು ಸಂಕಷ್ಟ ಸೂತ್ರ ರೂಪಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ,ಕಾವೇರಿ ನದಿ ನೀರು ವಿಚಾರವಾಗಿ ಶಾಸಕ ಎಚ್.ಟಿ.ಮಂಜು ದನಿ ಎತ್ತಿದಾಗ ಸಭಾಧ್ಯಕ್ಷರು ಬೇಗ ಬೇಗ ಎಂದು ಹೇಳುವ ಮೂಲಕ ವಿಷಯದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ,ನಾಡು, ನುಡಿ,ನೆಲ,ಜಲ ವಿಚಾರದಲ್ಲಿ ಅಸಡ್ಡೆ ತನ ಸರಿಯಲ್ಲ, ಸದನದಲ್ಲಿ ಗಂಭೀರವಾಗಿ ಚರ್ಚಿಸಿ ಕಾವೇರಿ ವಿಚಾರದಲ್ಲಿ ಕಾನೂನಾತ್ಮಕ ಹಾಗೂ ಕಾನೂನೇತರ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು,ಚಳವಳಿ ಬಗ್ಗೆ ನಿರ್ಲಕ್ಷ್ಯ ಸಲ್ಲದು, ದೇಶಕ್ಕೆ ಸ್ವಾತಂತ್ರ್ಯ ದೊರೆತದ್ದು, ಕನ್ನಡ ನಾಡು ಏಕೀಕರಣಗೊಂಡದ್ದು ಹೋರಾಟದಿಂದಲೇ ಎಂಬ ಅರಿವು ಇರಬೇಕು ಎಂದರು.
ಬಹು ಭಾಷಾ ತಾರೆ ಲೀಲಾವತಿ ನಿಧನಕ್ಕೆ ಕಂಬನಿ
ದಕ್ಷಿಣ ಭಾರತದ ಬಹು ಭಾಷಾತಾರೆ, ಕನ್ನಡ ನಾಡಿನ ಅಮ್ಮ ಲೀಲಾವತಿ ನಿಧನಕ್ಕೆ ಕಾವೇರಿ ಹೋರಾಟಗಾರರು ಕಂಬನಿ ಮಿಡಿದರು. ನಿರಂತರ ಧರಣಿ ಸ್ಥಳದಲ್ಲಿ ಲೀಲಾವತಿ ಭಾವಚಿತ್ರ ಇರಿಸಿ ಮೌನ ಆಚರಿಸುವ ಮೂಲಕ ಅಗಲಿದ ಹಿರಿಯ ಚೇತನಕ್ಕೆ ಸಂತಾಪ ಸೂಚಿಸಿದರು.
ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದೆ ಲೀಲಾವತಿ ಇಳಿ ವಯಸ್ಸಿನಲ್ಲಿಯೂ ಕಾವೇರಿ ಹೋರಾಟಕ್ಕೆ ಸ್ವಯಂ ಪ್ರೇರಿತರಾಗಿ ಭಾಗಿಯಾಗಿ ಹೋರಾಟಕ್ಕೆ ನೈತಿಕ ಶಕ್ತಿ ತುಂಬಿದ್ದನ್ನು ಹೋರಾಟಗಾರರು ಸ್ಮರಿಸಿದರು.
ಸುನಂದ ಜಯರಾಂ ಮಾತನಾಡಿ, ಜನಮಾನಸದ ಕಲಾವಿದೆ ಲೀಲಾವತಿ ಬದುಕು ಎಲ್ಲರಿಗೂ ಮಾದರಿ, ಅದ್ಭುತ ಕಲಾವಿದೆ,ಸಮಾಜಮುಖಿ ಜೀವನ,ಆದರ್ಶ ಪ್ರಾಯ ಬದುಕು, ಮಗನನ್ನು ಸತ್ಪ್ರಜೆಯಾಗಿ ಬೆಳೆಸಿದ ರೀತಿ ಎಲ್ಲವನ್ನು ನೋಡಿದರೆ ಅವರ ಬದುಕು ಕನ್ನಡಿಗರಿಗೆ ದಾರಿದೀಪ, ಕಾವೇರಿ ಚಳವಳಿಗೆ ಮಗನ ಜೊತೆಗೂಡಿ ಸೆಪ್ಟಂಬರ್ ನಲ್ಲಿ ಭಾಗಿಯಾಗಿದ್ದರು ಎಂದು ಹೇಳಿದರು.
ಧರಣಿ ಸ್ಥಳದಲ್ಲಿ ಅವರು ಕಾವೇರಿ ಗಾಗಿ ಯಾರು ಸಹ ಕಣ್ಣೀರು ಹಾಕಬಾರದು ಎಂದು ಹೇಳಿದ ಮಾತನ್ನು ಸರ್ಕಾರ ಜವಾಬ್ದಾರಿ ಯಿಂದ ಹೊಣೆಗಾರಿಕೆ ಪ್ರದರ್ಶಿಸಿದ್ದರೆ ಇಷ್ಟೊತ್ತಿಗೆ ಕರ್ನಾಟಕದ ಜನತೆಗೆ ನ್ಯಾಯ ಸಿಗುತ್ತಿತ್ತು ಎಂದು ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಮೊತ್ತಹಳ್ಳಿ ಕೆಂಪೇಗೌಡ, ಬಸವೇಗೌಡ ನೇತೃತ್ವ ವಹಿಸಿದ್ದರು.