ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿಯಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ

ಸಂಜೆವಾಣಿ ವಾರ್ತೆ
ಮಂಡ್ಯ : ಡಿ.03:- ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಕೊಳ್ಳದ ಪ್ರದೇಶದಲ್ಲಿ ನೀರಾವರಿ ತಜ್ಞರ ಮೂಲಕ ಅಧ್ಯಯನ ಮಾಡಿಸಿ ವರದಿ ಪಡೆದು ವೈಜ್ಞಾನಿಕವಾಗಿ ಕಾವೇರಿ ಸಂಕಷ್ಟ ಸೂತ್ರ ರೂಪಿಸುವಂತೆ ಭಾರತ ಸರ್ಕಾರಕ್ಕೆ ಸೂಚಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿ ಮನವಿ ಮಾಡಿದೆ.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಸಮಿತಿಯ ಕಾರ್ಯಕರ್ತರು ಮೆರವಣಿಗೆ ಹೊರಟು ಕೇಂದ್ರ ಅಂಚೆ ಕಚೇರಿಗೆ ತೆರಳಿ ಮುಖ್ಯ ನ್ಯಾಯಾಧೀಶರಿಗೆ ಪತ್ರ ಕಳುಹಿಸಿಕೊಟ್ಟರು.
ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಪ್ರದೇಶದಲ್ಲಿ ನೀರಿನ ಕೊರತೆಯಿಂದ ಜನ-ಜಾನುವಾರುಗಳು ಸಂಕಷ್ಟ ಎದುರಿಸುತ್ತಿವೆ, ಜಲಾಶಯಗಳಲ್ಲಿ ಇದ್ದ ನೀರನ್ನು ತಮಿಳುನಾಡಿಗೆ ಹರಿಸಲಾಗಿದ್ದು, ಡಿಸೆಂಬರ್ ತಿಂಗಳಲ್ಲಿ ನೀರು ಹರಿಸಲು ತುಂಬಾ ಸಂಕಷ್ಟ ಪರಿಸ್ಥಿತಿ ಇದೆ.ಹಾಗಾಗಿ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರನ್ನು ತುರ್ತಾಗಿ ನಿಲುಗಡೆ ಮಾಡಿ ಕರ್ನಾಟಕದ ಜನರ ಸಂಕಷ್ಟ ದೂರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಮಳೆ ಕೊರತೆಯಿಂದ ನೀರಿನ ಅಭಾವ ಎದುರಾದಾಗ ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಂಘರ್ಷ ಸನ್ನಿವೇಶ ಎದುರಾಗುತ್ತಿದೆ. ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡುತ್ತಾ ಬಂದಿವೆ. ಸಂಕಷ್ಟ ಸನ್ನಿವೇಶದಲ್ಲಿ ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ಮಾಡದೆ ಆದೇಶ ಮಾಡುತ್ತಿರುವುದರಿಂದ ಕರ್ನಾಟಕಕ್ಕೆ ತುಂಬಾ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ತುರ್ತಾಗಿ ಆಗಬೇಕಾಗಿದ್ದು, ನೀರಾವರಿ ತಜ್ಞರ ವರದಿ ಅನ್ವಯ ವೈಜ್ಞಾನಿಕ ಸಂಕಷ್ಟ ಸೂತ್ರ ರೂಪಿಸುವಂತೆ ಸೂಚಿಸಬೇಕು ಎಂದು ಮನವಿ ಮಾಡಿದರು.
ತಮಿಳುನಾಡಿನಲ್ಲಿ ನವೆಂಬರ್ ಎರಡನೇ ವಾರದಿಂದ ಹಿಂಗಾರು ಮಳೆ ವ್ಯಾಪಕವಾಗಿದೆ. ಅಲ್ಲಿನ ನಾಲೆಗಳಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದ್ದು, ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಾರೆ. ಆದರೆ ಕರ್ನಾಟಕದಲ್ಲಿ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುತ್ತದೆ. ಇದರಿಂದ ಬೆಳೆ ಬೆಳೆಯಲು ಕಷ್ಟಕರ ಸನ್ನಿವೇಶ ಇದೆ. ಇದೀಗ ಬರ ಪರಿಸ್ಥಿತಿಯಿಂದ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಕರ್ನಾಟಕ ರಾಜ್ಯದ ರೈತ ಕಾಪಾಡಲು ಮುಂದಾಗಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಸಮಿತಿಯ ಅಂದಾನಿ ಸೋಮನಹಳ್ಳಿ, ಕದಂಬ ಸೇನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್,ರಾಜ್ಯ ಸಂಚಾಲಕ ಎಸ್.ಶಿವಕುಮಾರ್, ಜೆ.ಪಿ.ಜಯಕುಮಾರ್, ಭಾರತೀಯ ಕಿಸಾನ್ ಸಂಘದ ಹಾಡ್ಯ ರಮೇಶರಾಜು, ಡಿ.ಅಂಕಯ್ಯ, ಶಿವು ಮದ್ದೂರು, ಪುಟ್ಟಮ್ಮ ಶ್ರೀಕಂಠೇಗೌಡ, ಎಸ್.ಶಿವಕುಮಾರ್, ಬಿ.ಪಿ ಅಪ್ಪಾಜಿ, ಪಣಕನಹಳ್ಳಿ ವೆಂಕಟೇಶ್, ಉಮ್ಮಡಹಳ್ಳಿ ನಾಗೇಶ್, ಗೌರಮ್ಮ, ಭಾಗ್ಯಲಕ್ಷ್ಮಿ ವಹಿಸಿದ್ದರು.