ಕಾವೇರಿ: ಸುಪ್ರೀಂಗೆ ಮೇಲ್ಮನವಿ

ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಹದೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಸಚಿವ ಎಚ್.ಸಿ. ಮಹದೇವಪ್ಪ ಇದ್ದಾರೆ.

ಬೆಂಗಳೂರು, ಸೆ. ೨೭- ತಮಿಳುನಾಡಿಗೆ ಮತ್ತೆ ೧೮ ದಿನ ೩ ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಇತಿಹಾಸ ಪ್ರಸಿದ್ಧ ಪವಿತ್ರ ಕ್ಷೇತ್ರವಾದ ಚಾಮರಾಜನಗರದ ಮಲೈಮಹದೇಶ್ವರ ದೇವಸ್ಥಾನಕ್ಕಿಂದು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ಮಾದೇಶ್ವರನ ಬೆಳ್ಳಿ ರಥೋತ್ಸವದಲ್ಲಿ ಭಾಗಿಯಾದ ನಂತರ ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ೧೮ ದಿನ ೩ ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಯಿಂದ ಬಿಡುವಂತೆ ನಿನ್ನೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶಿಸಿದೆ. ಈ ಆದೇಶದ ಸಂಬಂಧ ರಾಜ್ಯದ ಕಾನೂನು ತಂಡದ ಜತೆ ಚರ್ಚಿಸಿದ್ದೇನೆ. ಕಾನೂನು ತಜ್ಞರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಸೂಕ್ತ ಎಂದು ಹೇಳಿದ್ದಾರೆ ಎಂದರು.ಕಾನೂನು ತಜ್ಞರ ಸಲಹೆಯಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದರು.
ಕಾವೇರಿ ಜಲಾಯನ ಭಾಗದಲ್ಲಿ ಮಳೆ ಕೊರತೆಯಿಂದ ಜಲಾಶಯಗಳು ತುಂಬಿಲ್ಲ. ನಮ್ಮಲ್ಲೇ ನೀರಿಲ್ಲ. ಇನ್ನೂ ತಮಿಳುನಾಡಿಗೆ ನೀರು ಬಿಡುವುದು ಎಲ್ಲಿಂದ. ಹಾಗಾಗಿ ಮತ್ತೆ ೧೮ ದಿನ ೩ ಸಾವಿರ ಕ್ಯೂಸೆಕ್ ನೀರು ಹರಿಸುವ ಕಾವೇರಿ ನೀರು ನಿಯಂತ್ರಣದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಕಾವೇರಿ ವಿಚಾರದಲ್ಲಿ ರಾಜ್ಯದ ಸರ್ಕಾರದ ವೈಫಲ್ಯವನ್ನು ಖಂಡಿಸಿ ಬಿಜೆಪಿ ಇಂದು ವಿಧಾನಸೌಧದ ಬಳಿ ಧರಣಿ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಹಾಗೂ ಬಿಜೆಪಿಯವರು ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ಬಿಟ್ಟು ಅವರು ಬೇರೆನೂ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಮಳೆಗಾಗಿ ಪ್ರಾರ್ಥನೆ
ಮಲೈಮಹದೇಶ್ವರ ಸನ್ನಿಧಿಯಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಒಳ್ಳೆ ಮಳೆಯಾಗಲಿ ಎಂದು ಮಹದೇಶ್ವರನಲ್ಲಿ ಬೇಡಿಕೊಂಡಿದ್ದೇನೆ ಎಂದು ಅವರು ಹೇಳಿದರು.
೨ನೇ ಬಾರಿ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ iಹದೇಶ್ವರನ ಬೆಟ್ಟಕ್ಕೆ ಬಂದಿದ್ದೇನೆ. ಈ ಹಿಂದೆ ಮುಖ್ಯಮಂತ್ರಿಯಾದಗ iಹದೇಶ್ವರ ಬೆಟ್ಟಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬುದನ್ನು ಸುಳ್ಳು ಮಾಡಿದ್ದೇನೆ. ನಾನು ಮಾದೇಶ್ವರ ಬೆಟ್ಟಕ್ಕೆ ೧೨ ಬಾರಿ ಭೇಟಿ ನೀಡಿದ್ದೇನೆ. ನನ್ನ ಕುರ್ಚಿ ಗಟ್ಟಿಯಾಗಿದೆ. ನಾನು ಮೌಢ್ಯ, ಕಂದಾಚಾರ, ಮೂಢನಂಬಿಕೆಯನ್ನು ನಂಬಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.
ರಥೋತ್ಸವದಲ್ಲಿ ಭಾಗಿ
ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಇವರ ಜತೆಗೂಡಿ iಹದೇಶ್ವರ ಸ್ವಾಮಿಗೆ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ದಂಡ ಹಿಡಿದು ಬೆಳ್ಳಿ ರಥ ಸೇವೆ ನಡೆಸಿದ್ದರು.