
ಹುಬ್ಬಳ್ಳಿ, ಸೆ 3: ಕಾವೇರಿ ವಿವಾದ ವಿಷಯದಲ್ಲಿ ಸರ್ಕಾರ ರೈತರ ಹಿತಾಸಕ್ತಿ ಕಾಪಾಡುತ್ತಿಲ್ಲ ಎಂಬ ಆರೋಪ ತಳ್ಳಿಹಾಕಿರುವ ರಾಜ್ಯ ಸಮಾಜಕಲ್ಯಾಣ ಖಾತೆ ಸಚಿವ ಎಚ್.ಸಿ. ಮಹದೇವಪ್ಪ, ಈ ಕುರಿತಂತೆ ಸರ್ಕಾರ ಕಾನೂನಾತ್ಮಕ ಹೋರಾಟ ನಡೆಸಿ ಸಂಕಷ್ಟ ಪರಿಹಾರ ಸೂತ್ರ ಕಂಡುಕೊಳ್ಳಲಿದೆ ಎಂದು ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ನಮ್ಮಲ್ಲಿ ಸಾಕಷ್ಟು ನೀರಿನ ಸಂಗ್ರಹವಿಲ್ಲ. ಏನೇ ಆದರೂ ಕಾನೂನು, ನ್ಯಾಯಾಲಯ ಹಾಗೂ ನಮ್ಮ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನುಡಿದರು.
ಕಾಂಗ್ರೆಸ್‍ನಿಂದ ಬಿಜೆಪಿಗೆ ಶಾಸಕರುಗಳು ಬರುತ್ತಾರೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸುತ್ತ, ಅವರು ಆ ತರಹ ಮಾಡಿ ಮಾಡಿಯೇ ಬೀದಿಗೆ ಬಂದಿದ್ದಾರೆ ಎಂದು ಕುಟುಕಿದ ಮಹದೇವಪ್ಪ ಏನೆಲ್ಲ ಮಾತನಾಡುವವರಿಗೆ ಇದುವರೆಗೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗುತ್ತಿಲ್ಲ ಎಂದು ನುಡಿದರು.
ಸಿ.ಎಂ. ಬಗೆಹರಿಸುತ್ತಾರೆ:
ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿಯವರು ಮತ್ತೆ ತಮ್ಮ ಅಸಮಾಧಾನ ಹೊರಹಾಕಿರುವ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ರಾಯರೆಡ್ಡಿ ಸಚಿವರಾದವರು, ಹಿರಿಯ ಶಾಸಕರು, ನಮ್ಮ ಸ್ನೇಹಿತರು, ಈ ವಿಷಯವನ್ನು ಮುಖ್ಯಮಂತ್ರಿಗಳೇ ಬಗೆಹರಿಸುತ್ತಾರೆ ಎಂದು ಹೇಳಿದರು.