ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಇಂದು ಬೆಳಿಗ್ಗೆ ವಿಧಾನಸೌಧದ ಬಳಿ ಇರುವ ಗಾಂಧೀಜಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.
ಬೆಂಗಳೂರು, ಸೆ. ೨೭- ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ವೈಫಲ್ಯವನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿಧಾನಸೌಧದ ಆವರಣದಲ್ಲಿ ಇಂದು ಜಂಟಿ ಪ್ರತಿಭಟನಾ ಧರಣಿ ನಡೆಸಿದರು.ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಮತ್ತು ಜೆಡಿಎಸ್ ನಾಯಕರುಗಳು ಧರಣಿ ನಡೆಸಿ ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿದರು.
ಮೊದಲ ಬಾರಿಗೆ ದೋಸ್ತಿಗಳ ಧರಣಿ
ಬಿಜೆಪಿ-ಜೆಡಿಎಸ್ ಮೈತ್ರಿಯಾದ ನಂತರ ಎರಡೂ ಪಕ್ಷಗಳು ಒಟ್ಟಾಗಿ ಇಂದು ಪ್ರತಿಭಟನೆ ನಡೆಸಿದ್ದು, ಮೊದಲ ಬಾರಿಗೆ ದೋಸ್ತಿ ಪಕ್ಷಗಳು ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ನಡೆಸಿವೆ.ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೊದಲಿನಿಂದ ಎಡವಿದೆ. ರಾಜ್ಯದ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಾ ನಿರತ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೂರಿದರು.ಈ ಪ್ರತಿಭಟನಾ ಧರಣಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಎರಡೂ ಪಕ್ಷಗಳ ಕೆಲ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಮುಖಂಡರುಗಳು ಭಾಗಿಯಾಗಿದ್ದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಕಾವೇರಿ ವಿಚಾರದಲ್ಲಿ ರಾಜ್ಯದ ಹಿತವನ್ನು ಕಾಪಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ಎರಡೂ ಪಕ್ಷಗಳ ನಾಯಕರು ನೀಡಿದರು.
ಮೊದಲ ಬಾರಿ ಭೇಟಿ
ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಜತೆ ಮೈತ್ರಿ ಮಾತುಕತೆಗಳನ್ನು ಮಾಡಿಕೊಂಡು ಬಂದ ನಂತರ ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿಗೆ ಬಿಜೆಪಿ ನಾಯಕರನ್ನು ಈ ಧರಣಿ ಸಂದರ್ಭದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದು, ವಿಶೇಷವಾಗಿತ್ತು.