ಕಾವೇರಿ ವಿವಾದ ಸುಪ್ರೀಂಗೆ ಮೇಲ್ಮನವಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨೪:ಕಾವೇರಿ ನದಿ ನೀರು ವಿವಾದ ಕುರಿತಂತೆ ಸುಪ್ರೀಂಕೋರ್ಟ್‌ಗೆ ಇಂದು ಮೇಲ್ಮನವಿ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.ನಿನ್ನೆಯಷ್ಟೇ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಾಜ್ಯದ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಸಮರ ನಡೆಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಈಗ ಸುಪ್ರೀಂಕೋರ್ಟ್‌ಗೆ ಇಂದು ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಿತಕಾಪಾಡುವ ದೃಷ್ಟಿಯಿಂದ ಮೇಲ್ಮನವಿ ಸಲ್ಲಿಸಿ ರಾಜ್ಯದ ವಸ್ತುಸ್ಥಿತಿಯನ್ನು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ವೇಳೆ ಮನವರಿಕೆ ಮಾಡಿಕೊಡಲಾಗುವುದು ಎಂದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೇಂದ್ರ ನೀರಾವರಿ ಸಚಿವ ಗಜೇಂದ್ರಸಿಂಗ್ ಅವರ ಭೇಟಿಗೆ ಅವಕಾಶ ಕೋರಲಾಗಿದ್ದು, ಸಮಯ ಸಿಕ್ಕ ನಂತರ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯಲಾಗುವುದು ಎಂದು ಹೇಳಿದರು.
ಇಸ್ರೊಗೆ ಅಭಿನಂದನೆ
ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿರುವುದಕ್ಕೆ ಇಸ್ರೋ ಅಧ್ಯಕ್ಷ ಸೋಮನಾಥ್ ನೇತೃತ್ವದ ತಂಡವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.ಇಡೀ ಪ್ರಪಂಚವೇ ಭಾರತದ ಸಾಧನೆಯನ್ನು ಹಾಡಿ ಹೊಗಳುವಂತಹ ರೀತಿಯಲ್ಲಿ ನಮ್ಮ ಇಸ್ರೋ ವಿಜ್ಞಾನಿಗಳು ಅದ್ಭುತ ಕೆಲಸ ಮಾಡಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದ್ದಾರೆ ಎಂದು ಇಸ್ರೋ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.
ಜವಹರಲಾಲ್‌ನೆಹರು ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೂರದೃಷ್ಟಿ ಇಟ್ಟುಕೊಂಡು ಇಸ್ರೋ ಕಚೇರಿಯನ್ನು ಸಣ್ಣ ಶೆಡ್‌ವೊಂದರಲ್ಲಿ ಪ್ರಾರಂಭಿಸಿದರು. ಈಗ ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಂಡಿಂಗ್ ಯಶಸ್ವಿಗೊಳಿಸುವ ಮೂಲಕ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ ಎಂದು ಅವರು ಹೇಳಿದರು.