ಕಾವೇರಿ ವಿವಾದ: ವಿಚಾರಣೆ ಸೆ. 21ಕ್ಕೆ

ನವದೆಹಲಿ, ಸೆ. ೬- ಕಾವೇರಿ ನದಿನೀರು ಹಂಚಿಕೆ ಕುರಿತಂತೆ ತಮಿಳುನಾಡು ಮತ್ತು ಕರ್ನಾಟಕ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವಿಚಾರಣೆಯನ್ನು ಸೆ. ೨೧ ಕ್ಕೆ ಮುಂದೂಡಲಾಗಿದೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಪೈಕಿ ಓರ್ವ ನ್ಯಾಯಮೂರ್ತಿಗಳು ಗೈರುಹಾಜರಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು.
ಕಾವೇರಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತ.ನಾಡು ಸರ್ಕಾರ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿತ್ತು. ಈ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕರ್ನಾಟಕದಿಂದಲೂ ಅರ್ಜಿ ಸಲ್ಲಿಸಲಾಗಿತ್ತು.
ಈ ಮೊದಲು ಅರ್ಜಿ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತಾದರೂ ನ್ಯಾಯಾಧೀಶ ಅನುಪಸ್ಥಿತಿ ಹಿನ್ನೆಲೆಯಲ್ಲಿ ಇಂದಿನ ಕಲಾಪ ಪಟ್ಟಿಗಳಿಂದ ಹಿಂತೆಗೆದುಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಉಪಸ್ಥಿತರಿದ್ದ ನ್ಯಾಯಾಧೀಶರ ಮುಂದೆ ತಮಿಳುನಾಡು ಪರ ವಕೀಲ ಮುಕುಲ್ ರೋಹ್ಟಗಿ ಅರ್ಜಿ ವಿಚಾರಣೆ ಪ್ರಸ್ತಾಪಿಸಿದರು. ಇಂದು ವಿಚಾರಣೆ ನಡೆಸುವುದಾಗಿ ಪೀಠ ಹೇಳಿತ್ತು. ಈಗ ಮತ್ತೆ ವಿಚಾರಣೆಯಿಂದ ಕೈಬಿಡಲಾಗಿದ್ದು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದರು.
ಈ ಮನವಿಗೆ ಸ್ಪಂದಿಸಿದ ನ್ಯಾಯಮೂತಿ ಗವಾಯಿ ಅವರು ನ್ಯಾಯಮೂರ್ತಿ ನರಸಿಂಹ ಅವರ ಅನುಪಸ್ಥಿತಿ ಕಾರಣ ಇಂದು ನಡೆಯಬೇಕಾಗಿದ್ದ ಅರ್ಜಿಯ ವಿಚಾರಣೆಯನ್ನು ಕೈಬಿಡಲಾಗಿದೆ. ಮುಂದಿನವಾರ ತಾವು ಕೂಡ ವಿಚಾರಣೆ ವೇಳೆ ಲಭ್ಯರಾಗುವುದಿಲ್ಲ.
ಮುಖ್ಯ ನ್ಯಾಯಾಧೀಶರ ಮುಂದೆ ಹೊಸ ಪೀಠಕ್ಕೆ ಮನವಿ ಮಾಡುವಂತೆ ಗವಾಯಿ ಅವರು ಸೂಚಿಸಿದರು. ಇದಕ್ಕೆ ಒಪ್ಪಂದ ಎರಡು ರಾಜ್ಯದ ವಕೀಲರು ಹೊಸಪೀಠದಲ್ಲಿ ಮೊದಲಿನಿಂದ ವಿಚಾರಣೆ ಆರಂಭಿಸಬೇಕಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಗವಾಯಿ ಅವರು ಸೆ. ೨೧ ರಂದು ವಿಚಾರಣೆ ನಡೆಸುವುದಾಗಿ ಹೇಳಿದರು. ಇದೇ ವೇಳೆ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಪರ ಸಲ್ಲಿಸಿದ್ದ ಅರ್ಜಿ ಪ್ರಸ್ತಾಪಿಸಿದ್ದ ವಕೀಲ ವಿದ್ಯಾಸಾಗರ್ ಮುಖ್ಯ ಅರ್ಜಿಯ ಜೊತೆ ವಿಲೀನಕ್ಕೆ ಮನವಿ ಮಾಡಿದರು. ಮುಖ್ಯ ಅರ್ಜಿ ವಿಚಾರಣೆ ವೇಳೆ ಈ ಪ್ರಸ್ತಾಪ ಪರಿಗಣಿಸುವುದಾಗಿ ಗವಾಯಿ ತಿಳಿಸಿದರು.