ಮಂಡ್ಯ: ಕಾವೇರಿ ನೀರನ್ನು ಅವಲಂಬಿಸಿರುವ ಕನ್ನಡಿರಿಗೆ ಎಷ್ಟು ಅನ್ಯಾಯ ಆಗುತ್ತಿದೆ ಎಂಬುದು ತಿಳಿದಿದೆ, ಪ್ರತಿ ಬಾರಿಯೂ ಕಾವೇರಿ ವಿಚಾರದಲ್ಲಿ ನ್ಯಾಯ ಸಿಗುತ್ತಿಲ್ಲ, ಇದು ನಿಲ್ಲಲು ಸಂಕಷ್ಟ ಸೂತ್ರ ಅನಿವಾರ್ಯವಿದೆ ಎಂದು ನಟ ವಿನೋದ್ ರಾಜ್ ಆಗ್ರಹಿಸಿದರು.
ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಜಿಲ್ಲಾ ರೈತಹಿತಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಗೆ ಬೆಂಬಲ ನೀಡಿ ಅವರು ಮಾತನಾಡಿದರು.
ಕೃಷಿ ಮಾಡುತ್ತಾ ನನಗೆ ನೀರಿನ ಅಭಾವ ತಿಳಿಯಿತು. ಪ್ರತಿ ಬಾರಿಯೂ ನಮಗೆ ಅನ್ಯಾಯ ಆಗಿದೆ. ಸಂಕಷ್ಟ ಸೂತ್ರ ಅನಿವಾರ್ಯವಿದೆ. ನಾವು ಕ್ಷೇಮವಾಗಿದ್ದರೆ ಇನ್ನೊಬ್ಬರ ಕ್ಷೇಮ ವಿಚಾರಿಸಬಹುದು. ನಾವು ಕ್ಷಾಮವಾದಾಗ ಇನ್ನೊಬವರ ಕ್ಷೇಮ ಕೇಳಲು ಆಗಲ್ಲ ಎಂದರು.
ತುಂಬಾ ನೋವುಂಟು ಮಾಡುವ ಸನ್ನಿವೇಶಗಳೇ ಹೆಚ್ಚಾಗಿದೆ, ಮಲತಾಯಿ ಧೋರಣೆಯೇ ಹೆಚ್ಚಾಗಿದೆ, ನಮ್ಮ ರೈತರಿಗೆ ಇಂತಹ ದುಸ್ಥಿತಿ ಬರಬಾರದು, ಕಾನೂನಿಗಿಂತ ನಾವು ದೊಡ್ಡವರಲ್ಲ. ಸುಪ್ರೀಂ ಹಾಗೂ ಪ್ರಾಧಿಕಾರ ವಾಸ್ತವ ಸ್ಥಿತಿ ನೋಡಿ ಆದೇಶ ಮಾಡಬೇಕು. ನೀರಿಲ್ಲ ನೀರಿಲ್ಲ ಎಂದು ಹೋರಾಡುತ್ತಿದ್ದೇವೆ. ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ, ರೈತರನ್ನು ವಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿದರು.
ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಸರ್ಕಾರ ಚಿಂತನೆ ಮಾಡಬೇಕು. ವಾಸ್ತವ ಸ್ಥಿತಿ ಅರಿತುಕೊಳ್ಳಬೇಕು. ನಮಗೆ ಹವಾಮಾನವೇ ಆಗುತ್ತಿದೆ, ಜನರಿಗೋಸ್ಕರ ಯಾವ ಕೆಲಸನೂ ನಡೆಯುತ್ತಿಲ್ಲ, ರೈತರಿಗೆ ಅರಣ್ಯ ಇಲಾಖೆಯಿಂದಲೂ ತೊಂದರೆಯಾಗಿದೆ ಇದು ನಿಲ್ಲಬೇಕು. ನೀರಿಗಾಗಿ ಪ್ರಾಮಾಣಿಕವಾಗಿ ಹಾಗೂ ಶಾಂತಿಯಿಂದ ಹೋರಾಟ ಮಾಡುತ್ತಿದ್ದಾರೆ ಅದು ಮುಂದುವರಿಯಲಿ, ಇಂತಹ ಸ್ಥಿತಿ ಬರದಿರಲಿ ಎಂದು ಶ್ರೀ ಭುವನೇಶ್ವರಿ, ಶ್ರೀ ಚಾಮುಂಡೇಶ್ವರಿ ಹಾಗೂ ಕಾವೇರಿ ತಾಯಿನ ಕೈ ಮುಗಿದು ಬೇಡಿಕೊಳ್ಳುತ್ತೇನೆ, ಎಂದಿಗೂ ಕಷ್ಟ ಕೊಡಬೇಡಿ ಕಣವ್ವಾ ಎಂದು ಬೇಡಿಕೊಳ್ಳುತ್ತೇನೆ ಎಂದರು.
ತಾಯಿ ಲೀಲಾವತಿ ಭಾಗವಹಿಸಿದ್ದರು.