
ಮೈಸೂರು: ಮಾ.26:- ಬಹುಪಾಲು ಪ್ರಶಸ್ತಿ-ಪುರಸ್ಕಾರಗಳು, ಗೌರವ-ಸನ್ಮಾನಗಳು ಅನರ್ಹರ ಪಾಲಾಗಿ ಘನತೆ ಕಳೆದು ಕೊಳ್ಳುತ್ತಿರುವ ಇವತ್ತಿನ ಕಾಲಘಟ್ಟದಲ್ಲಿ ಇಂಥ ಪ್ರಶಸ್ತಿಗಳನ್ನು ಕೊಡುವವರನ್ನು ಹಾಗೂ ತೆಗೆದುಕೊಳ್ಳುವವರನ್ನು ಜನ ಅನುಮಾನದಿಂದಲೂ, ಗುಮಾನಿಯಿಂದಲೂ ನೋಡುವಂತಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಬೇಸರ ವ್ಯಕ್ತಪಡಿಸಿದರು.
ನಗರದ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನ ಸಂಯುಕ್ತವಾಗಿ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗದಲ್ಲಿ ಕೊಡಗಿನ ಶ್ರೀಮತಿ ಗೌರು ಪೆÇನ್ನವ್ವ ನಂಬಿ ಯಪಂಡ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಜೀವನದಿ ಕಾವೇರಿ ಪ್ರಶಸ್ತಿಪ್ರದಾನ ಸಮಾರಂಭನ್ನು ಉದ್ಘಾಟಿಸಿ ಮಾತನಾಡಿದ ಅವರು,ಕೊಡಗಿನ ಭಾಗಮಂಡಲದಲ್ಲಿ ಹುಟ್ಟಿ ತಾನು ಹರಿದ ನೆಲದಲ್ಲೆಲ್ಲಾ ಸಮೃದ್ಧಿಯನ್ನು ಸೃಷ್ಟಿಸಿ ಎಲ್ಲರ ಜೀವನವನ್ನು ಪಾವನ ಗೊಳಿಸಿ ರುವ ಕನ್ನಡ ನಾಡಿನ ಜೀವನದಿ ಕಾವೇರಿಯು ದೇವನದಿಯೂ ಆಗಿದ್ದು ಇಂತಹ ಭಾಗ್ಯನಿಧಿ ಕಾವೇರಿ ತಾಯಿಯ ಹೆಸರಿನಲ್ಲಿ ಜೀವನದಿ ಕಾವೇರಿ ಪ್ರಶಸ್ತಿಯನ್ನು ಸಾಧಕರಿಗೆ ನೀಡುತ್ತಿರುವುದು ನಿಜಕ್ಕೂ ಸಾರ್ಥಕ ಕಾರ್ಯವೆಂದರು.
ಎರಡು ಕಾರಣಕ್ಕೆ ಈ ಪ್ರಶಸ್ತಿಯು ಅತ್ಯಂತ ಮೌಲ್ಯವಾದದ್ದಾಗಿದೆ. ಮೊದಲ ಕಾರಣ ಸರ್ಕಾರದಿಂದಾಗಲಿ, ಖಾಸಗಿಯವರಿಂದಾಗಲಿ ಒಂದು ನಯಾ ಪೈಸೆಯನ್ನೂ ಪಡೆಯದೆ ಓರ್ವ ನಿವೃತ್ತ ಶಿಕ್ಷಕಿಯಾಗಿ ತಮಗೆ ಬರುತ್ತಿರುವ ನಿವೃತ್ತಿ ವೇತನದಿಂದಲೇ ಪ್ರತೀವರ್ಷ ಎನ್.ಕೆ.ಕಾವೇರಿಯಮ್ಮನವರು ತಾವು ಕಾವೇರಿ ನೀರು ಕುಡಿದು, ಬೆಳೆದು ಬದುಕನ್ನು ರೂಪಿಸಿ ಕೊಂಡಿರುವ ಅಮೃತಮಯಿ ತಾಯಿ ಕಾವೇರಿಯ ಋಣ ಪ್ರಜ್ಞೆಯನ್ನು ಮನಸ್ಸಿನಲ್ಲಿ ಟ್ಟುಕೊಂಡು ಅಲ್ಪವಾದರೂ ತಾಯಿ ಋಣ ತೀರಿಸುವ ಶ್ರೇಷ್ಠ ಕಾರ್ಯಮಾಡುತ್ತಿರುವುದು. ಮತ್ತೊಂದು ಇಂತಹ ಶ್ರೇಷ್ಠ ಪ್ರಶಸ್ತಿಯನ್ನು ಎಲೆ ಮರೆಯ ಕಾಯಿಯಂತೆ ತಮ್ಮ ಪಾಡಿಗೆ ತಾವು ಸೇವೆ ಸಲ್ಲಿಸುತ್ತಿರುವ ಅಷ್ಟೇ ಶ್ರೇಷ್ಠರೆನಿಸಿದ ನೈಜ ಸಾಧಕರನ್ನು ಹುಡುಕಿ ಗೌರವಿಸುತ್ತಿರುವುದು. ಪ್ರಶಸ್ತಿಗಳನ್ನು ಕೊಡುವುದು ಮುಖ್ಯವಲ್ಲ ತೆಗೆದುಕೊಳ್ಳುವುದು ಮುಖ್ಯವಲ್ಲ. ಇವೆರಡರ ಮಧ್ಯೆ ಮೌಲ್ಯವನ್ನು ಉಳಿಸಿಕೊಂಡು ಹೋಗುವುದು ಬಹಳ ಮುಖ್ಯ. ಹಾಗಾಗಿ ಇವತ್ತು ಪ್ರಶಸ್ತಿ ಕೊಟ್ಟವರು ಮತ್ತು ಇದನ್ನು ಪಡೆದವರ ಜವಾಬ್ದಾರಿ ಹೆಚ್ಚಾಗಿದ್ದು ಪ್ರಶಸ್ತಿ ಎಂದರೆ ಹೀಗಿರಬೇಕು, ಪ್ರಶಸ್ತಿ ಪುರಸ್ಕೃತರೆಂದರೆ ಇವರಂತಿರಬೇಕು ಎನ್ನುವಂತೆ ಮುಂದಿನವರಿಗೆ ಮಾದರಿಯಾಗ ಬೇಕಾಗಿದೆಯೆಂದು ಹೇಳಿದರು.
ಸಾಧಕರಾದ ಹರೀನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿ.ಎನ್. ಉಮೇಶ್ವರಿ, ಹರವೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಕರವಟ್ಟಿರ ಗಂಗಮ್ಮ , ಅಸ್ವಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್. ಬಿ. ಚಿಕ್ಕದೇವಿ, ಬಲ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಎಸ್.ಗಿರೀಶ್, ವಾಹನ ಚಾಲಕ ಟಿ.ಮೋಹನ್ ಕುಮಾರ್,ಸಮಾಜ ಸೇವಾಕರ್ತೆ ಮಾಲಿನಿ ಆರ್. ಪಾಲಾಕ್ಷ, ಹಾಗೂ ಶುಶ್ರೂಷಕಿ ಜಯಂತಿ ಬಾಲ ಸುಬ್ರಹ್ಮಣ್ಯ ಅವರುಗಳಿಗೆ ಖ್ಯಾತ ಕಲಾವಿದೆ ಮತ್ತು ಲೇಖಕಿ ಡಾ. ಜಮುನಾ ರಾಣಿ ಮಿರ್ಲೆ ಅವರು ‘ಜೀವನದಿ ಕಾವೇರಿ ಪ್ರಶಸ್ತಿ’ ಯನ್ನು ಪ್ರದಾನ ಮಾಡಿ ಗಣ್ಯರೊಡನೆ ಗೌರವಿಸಿದರು. ನಂತರ ಮಾತನಾಡಿದ ಅವರು ಪರಿವರ್ತನೆ ಜಗದ ನಿಯಮ ಪುರುಷ ಪ್ರಧಾನ ಕಾಲ ಹೋಯಿತು. ಈಗ ಸ್ತ್ರೀ ಪುರುಷರಲ್ಲಿ ಸಮಾನತೆ ಕಾಣಬಹುದಾಗಿದೆ. ಒಂದು ರೀತಿ ಪುರುಷರಿಗೆ ಸಮನಾಗಿ ಸ್ತ್ರೀ ಕೂಡ ಎಲ್ಲಾ ರಂಗಗಳಲ್ಲೂ ತನ್ನನ್ನು ಗುರುತಿಸಿ ಕೊಳ್ಳುತ್ತಿ ದ್ದಾಳೆ. ಇದಕ್ಕೆ ಮೂಲ ಕಾರಣ ಶಿಕ್ಷಣವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಹೆಣ್ಣು ಗಂಡು ಗಳೆಂಬ ಭೇದ ಭಾವವಿರದೆ ಪ್ರತಿಯೊಬ್ಬರಿಗೂ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ತಿಳಿಸಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎನ್.ಪ್ರಭಾ ಅವರು, ಸಮಾಜದಲ್ಲಿ ಮುತ್ತು ರತ್ನದೋಪಾದಿಯಲ್ಲಿರುವ ಸಾಧಕ ಸಾಧಕಿಯರನ್ನು ಗುರುತಿಸಿ ಗೌರವಿಸುವ ಕೆಲಸ ಅದರಲ್ಲೂ ತಾಯಿ ಹೆಸರಲ್ಲಿ ಮಾಡುವುದು ಬಹು ಹೆಮ್ಮೆಯ ವಿಷಯ ಕಾಲ ಹಿಂದಿನಂತಿಲ್ಲ ಇಂದು ಮಹಿಳೆಯರಿಗೆ ವಿಫಲ ಅವಕಾಶಗಳಿವೆ ಇದನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸಾಧಕಿಯರಾಗಬೇಕು. ಕನಸು ಕಾಣಬೇಕು ಅದು ಒಳ್ಳೆಯ ಸಂಸ್ಕಾರದ್ದಾಗಿರಬೇಕು. ಆಗ ಮಾತ್ರ ಕಂಡ ಕನಸುಗಳು ನನಸಾಗಿ ಸಾಕಾರಗೊಳ್ಳುತ್ತವೆ. ಆಗ ಹೆಣ್ಣು ಮಕ್ಕಳು ಪುರುಷರ ಮಟ್ಟಕ್ಕೆ ಅಥವಾ ಅದಕ್ಕಿಂತಲೂ ಮಿಗಿಲಾದ ಎತ್ತರದ ಸಾಧಕಿಯರಾಗಬಹುದು ಎಂದು ಹೇಳಿದರು.
ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ವಿಶ್ರಾಂತ ಶಿಕ್ಷಕ ಎಚ್. ವಿ. ಮುರಳಿಧರ, ಶಿಕ್ಷಕಿಯರಾದ ಫಾತಿಮಾ, ಎನ್.ಅನುಪಮಾ , ಚಿತ್ರಕಲಾ ಶಿಕ್ಷಕ ಮನೋಹರ್, ವಿಶ್ರಾಂತ ಇಂಜಿನಿಯರ್ ಮನುಗನಹಳ್ಳಿ ಎಸ್.ಗೋವಿಂದೇಗೌಡ ಮುಂತಾದವರು ಉಪಸ್ಥಿತರಿದ್ದರು.