ಕಾವೇರಿ ನೀರಿಗಾಗಿ ಮುಂದುವರೆದ ಸಹಿ ಸಂಗ್ರಹ

ಸಂಜೆವಾಣಿ ನ್ಯೂಸ್
ಮೈಸೂರು : ಮೇ.05:- ಕಾವೇರಿ ಕ್ರಿಯಾ ಸಮಿತಿಯಿಂದ ಈ ಶನಿವಾರವೂ ಸಹ ಕಾವೇರಿ ನೀರಿಗಾಗಿ ಸಹಿ ಸಂಗ್ರಹ ಚಳವಳಿಯನ್ನು ಮುಂದುವರೆಸಲಾಯಿತು.
ಕಾವೇರಿ ಕ್ರಿಯಾಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್ ನೇತೃತ್ವದಲ್ಲಿ ದೊಡ್ಡಗಡಿಯಾರದ ಮುಂಭಾಗ ಜಮಾವಣೆಗೊಂಡ ನೂರಾರು ಮಂದಿ ಕಾವೇರಿ ನೀರು ರಾಜ್ಯದ ಪಾಲಿಗೆ ಉಳಿಸಿ ಎಂದು ಆಗ್ರಹಿಸಿದರು. ಬೆಳ್ಳಿಗ್ಗೆ 11ರಿಂದ 1 ರವರೆಗೆ ನೂರಾರು ಮಂದಿಯಿಂದ ಕಾವೇರಿ ನೀರಿಗಾಗಿ ಸಹಿ ಮಾಡುವ ಮೂಲಕ ಹೋರಾಟ ಬೆಂಬಲಿಸಿದರು.
ಇದೇ ವೇಳೆ ಸಮಿತಿಯ ಅಧ್ಯಕ್ಷ ಎಸ್.ಜಯಪ್ರಕಾಶ್ ಮಾತನಾಡಿ, ಕಾವೇರಿ ನೀರಿಗಾಗಿ ಮತ್ತೆ ತಮಿಳುನಾಡು ಅರ್ಜಿ ಸಲ್ಲಿಸಿರುವುದು ಖಂಡನೀಯ. ಈಗಾಗಲೇ ರಾಜ್ಯ ಸರ್ಕಾರ ಹೆಚ್ಚಿನ ನೀರು ಹರಿಸಿ ರಾಜ್ಯದ ಜನರ ಕುಡಿಯುವ ನೀರಿಗೆ ಆಹಾಹಾಕಾರ ಉಂಟಾಗಿದೆ. ಇದನ್ನು ಖಂಡಿಸಿ ಹೋರಾಟ ನಡೆಸುತ್ತಿರುವ ಈ ಹೊತ್ತಿನಲ್ಲಿ ಮತ್ತೆ ತಮಿಳುನಾಡು ನೀರಿಗಾಗಿ ಅರ್ಜಿ ಸಲ್ಲಿಸಿರುವುದು ಖಂಡನೀಯ.
ರಾಜ್ಯ ಸರ್ಕಾರ ಈಗಾಗಲೇ ಕಾವೇರಿ ನದಿ ನೀರನ್ನು ಬರಿದಾಗಿಸಿ ರೈತರನ್ನಷ್ಟೇ ಹಾಗೂ ಕುಡಿಯುವ ನೀರಿಗೂ ಅಭಾವ ಉಂಟಾಗುವ ಸ್ಥಿತಿ ನಿರ್ಮಾಣ ಮಾಡುವಂತೆ ಮಾಡಿದ್ದಾರೆ. ಹೀಗಾಗಿ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಶಾಶ್ವತ ಪ್ರಾಧಿಕಾರ ರಚನೆ ಆಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾವೇರಿ ಕ್ರಿಯಾಸಮಿತಿ ಕಾರ್ಯದರ್ಶಿ ತೇಜೇಶ್ ಲೋಕೇಶ್ ಗೌಡ ಇನ್ನಿತರರು ಉಪಸ್ಥಿತರಿದ್ದರು.