ಕಾವೇರಿ ನೀರಿಗಾಗಿ ಪ್ರಾಣ ಕೊಡಲು ಸಿದ್ದ

ಕೆ.ಆರ್.ಪೇಟೆ.ಸೆ.24:- ಕಾವೇರಿ ನೀರಿಗಾಗಿ ತಮ್ಮ ಪ್ರಾಣ ಬೇಕಾದರೂ ಕೊಡಲು ಸಿದ್ದವಿದ್ದು ನೀರು ನಿಲ್ಲಿಸುವವರೆಗೂ ಹೋರಾಟ ಮಾಡುತ್ತೇವೆ ಎಂದು ತಾಲ್ಲೂಕು ಜಯಕರ್ನಾಟಕ ಸಂಘಟನೆ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್ ನೇತೃತ್ವದಲ್ಲಿ ನೂರಾರು ಪ್ರತಿಭಟನಾಕಾರರು ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಜಮಾಯಿಸಿ ಕಾವೇರಿ ನಮ್ಮದು, ತಮಿಳುನಾಡಿಗೆ ನೀರನ್ನು ಬಿಟ್ಟ ಕ್ರಮ ಸರಿಯಲ್ಲ ಎಂದು ಕರ್ನಾಟಕ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸೋಮಶೇಖರ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ನಮ್ಮ ಎಲ್ಲಾ ಜಲಾಶಯಗಳಲ್ಲಿಯೂ ನೀರಿನ ಸಂಗ್ರಹದ ಪ್ರಮಾಣ ಕಡಿಮೆಯಿದೆ. ನಮಗೇ ಕುಡಿಯಲು ನೀರಿನ ಸಮಸ್ಯೆ ತಲೆದೋರಿದ್ದು ತಮಿಳುನಾಡಿನ ಜನರ ಬೆಳೆಗಳಿಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರನ್ನು ಬಿಡುತ್ತಿರುವ ಸಿದ್ದರಾಮಯ್ಯನವರ ಸರ್ಕಾರದ ಕ್ರಮ ಸರಿಯಲ್ಲ. ನಾಡಿನ ಹಿತರಕ್ಷಣೆ ಮಾಡಬೇಕಾದುದು ಸರ್ಕಾರದ ಮೊದಲ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಕೂಡಲೇ ನೀರು ನಿಲ್ಲಿಸಿ ಇಲ್ಲಿನ ಜನರ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಜಯಕರ್ನಾಟಕ ಸಂಘಟನೆ ಕಾರ್ಯದ್ಯಕ್ಷ ಎಸ್.ರವಿ, ಉಪಾದ್ಯಕ್ಷ ಯುವರಾಜ್, ಆನಂದ್, ಯೂತ್ ಅಧ್ಯಕ್ಷ ಮಹೇಶ್, ಆನಂದ್, ನಗರಾಧ್ಯಕ್ಷ ಯೋಗೇಶ್, ಪ್ರಧಾನ ಕಾರ್ಯದರ್ಶಿ ಪ್ರಭುನಾಯಕ, ವಸಂತ, ದಿನೇಶ, ರಾಘವೇಂದ್ರ, ಹರೀಶ, ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಮ್ಮ, ಪ್ರತಾಪ್, ಸುಂದ್ರೇಶ್ ಸೇರಿದಂತೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.