ಕಾವೇರಿ ಕಿಚ್ಚು: ಭುಗಿಲೆದ್ದ ಆಕ್ರೋಶ

ಹಲವರು ವಶಕ್ಕೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೨೧:ತಮಿಳುನಾಡಿಗೆ ೧೫ ದಿನಗಳ ಕಾಲ ನಿತ್ಯ ೫ ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶದ ಬೆನ್ನಲೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಬೆಂಗಳೂರು, ಮಂಡ್ಯ ಸೇರಿದಂತೆ ಹಲವೆಡೆ ರಸ್ತೆ ತಡೆ, ವಿಧಾನಸೌಧ ಮುತ್ತಿಗೆ ಯತ್ನ ಸೇರಿದಂತೆ ಪ್ರತಿಭಟನೆಯ ಕಾವು ಜೋರಾಗಿದೆ.
ಬೆಂಗಳೂರಿನಲ್ಲಿಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನೂರಾರು ಕರವೇ ಕಾರ್ಯಕರ್ತರು ವಿಧಾನಸೌಧ ಮುತ್ತಿಗೆ ಹಾಕಲು ಮೆರವಣಿಗೆ ಮೂಲಕ ತೆರಳಲು ಮುಂದಾದಾಗ ಮೌರ್ಯ ಸರ್ಕಲ್ ಬಳಿ ಪೊಲೀಸರು ರ್‍ಯಾಲಿಯನ್ನು ತಡೆದು ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ಕರ್ನಾಟಕ ಮತ್ತು ಕಾವೇರಿ ಕಣಿವೆ ಪ್ರದೇಶದಲ್ಲಿ ತೀವ್ರತರವಾದ ಬರಗಾಲವಿದೆ. ತಮಿಳುನಾಡಿಗೆ ಮತ್ತೆ ಹದಿನೈದು ದಿನಗಳ ಕಾಲ ೫,೦೦೦ ಕ್ಯೂಸೆಕ್ಸ್ ನೀರು ಹರಿಸಲು ಆದೇಶ ಮಾಡಿರೋದು ಅನ್ಯಾಯ. ಹಳೇ ಮೈಸೂರಿನ ಭಾಗದ ಜನರಿಗೆ ವಿಷ ಉಣಿಸುವ ಆದೇಶವಾಗಿದೆ.ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇದನ್ನು ಪಾಲಿಸಬಾರದು. ಕರ್ನಾಟಕದ ರೈತರಿಗೆ ಮರಣ ಶಾಸನವಾಗಿರುವ ಈ ಆದೇಶ ವಾಪಾಸ್ ಪಡೆಯಬೇಕು. ಜನರಿಗೆ ಕುಡಿಯುವ ನೀರಿಗೆ ಆಸರೆಯಾಗಿರುವ ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದು ಎಂದರು.
ಅದು ಅಲ್ಲದೆ, ಸುಪ್ರೀಂ ಕೋರ್ಟ್ ಆದೇಶ ರಾಜ್ಯದ ರೈತರಿಗೆ ಮರಣ ಶಾಸನ. ತಕ್ಷಣ ಆದೇಶ ಹಿಂಪಡೆಯಬೇಕು. ಯಾವುದೇ ಕಾರಣಕ್ಕೂ ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ.

ತಮಿಳು ನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಇಂದು ಬೆಳಿಗ್ಗೆ ಗಾಂಧಿ ನಗರದಿಂದ ಫ್ರೀಡಂ ಪಾರ್ಕ್‌ವರೆಗೆ ಜಾಥಾ ನಡೆಸಿ ಪ್ರತಿಭಟನೆ ನಡೆಸಿದರು.
ಮಂಡ್ಯದಲ್ಲೂ ಪ್ರತಿಭಟನೆ
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ತೀರ್ಪು ನೀಡುತ್ತಿದ್ದಂತೆಯೇ ಮಂಡ್ಯದಲ್ಲಿ ಪ್ರತಿಭಟನೆ ಜೋರಾಗಿದ್ದು, ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ, ಬೈಕ್ ರ್‍ಯಾಲಿ ನಡೆದಿದ್ದು, ಇನ್ನೊಂದೆಡೆ ರೈತಪರ, ಕನ್ನಡಪರ, ಪ್ರಗತಿಪರ ಸಂಘಟನೆಗಳು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ
ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ.