ಕಾವೇರಿ ಆಕ್ರೋಶ ಸ್ಫೋಟ

ಪ್ರತಿಭಟನೆ ಬಿರುಸು

ತಮಿಳುಣಾಡಿಗೆ ಕಾವೇರಿ ನೀರು ಬಿಡುವ ಆದೇಶ ವಿರೋಧಿಸಿ ಮಂಡ್ಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಆದಿಚುಂಚನ ಶ್ರೀಗಳೂ ಸೇರಿದಂತೆ ವಿವಿಧ ಮಠಾಧೀಶರು, ರಾಜಕೀಯ ನಾಯಕರು, ರೈತ ಹಾಗೂ ಕನ್ನಡಪರ ಮುಖಂಡರು ಕಾರ್ಯಕರ್ತರು ಭಾಗಿಯಾದರು.

ಬೆಂಗಳೂರು, ಸೆ. ೨೨- ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶಕ್ಕೆ ರೈತ ಮತ್ತು ಕನ್ನಡ ಪರ ಸಂಘಟನೆಗಳ ಆಕ್ರೋಶ ಸ್ಫೋಟಗೊಂಡಿದೆ. ಬೆಂಗಳೂರು, ಮಂಡ್ಯ ಸೇರಿದಂತೆ ಕಾವೇರಿ ಜಲಾಯನ ಭಾಗದಲ್ಲಿ ಹೋರಾಟ ತೀವ್ರಗೊಂಡಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದು, ಆದಿಚುಂಚನಗಿರಿ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಎಂಬ ಸುಪ್ರೀಂಕೋರ್ಟ್‌ನ ಆದೇಶ ಹೊರಬಿದ್ದ ಬೆನ್ನಲ್ಲೆ ಚಳವಳಿ ತೀವ್ರಗೊಂಡಿದ್ದು, ನಾಳೆ ಮಂಡ್ಯ ಬಂದ್‌ಗೂ ಕರೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್ ನಡೆಸುವ ಬಗ್ಗೆಯೂ ಕನ್ನಡಪರ ಸಂಘಟನೆಗಳು ಸಮಾಲೋಚನೆಯಲ್ಲಿ ತೊಡಗಿವೆ.
ರಾಜ್ಯದ ರೈತರ ಹಿತವನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿ ನಡೆದಿರುವ ಹೋರಾಟ ನಡೆದಿರುವಾಗಲೇ ವಿರೋಧ ಪಕ್ಷವಾದ ಬಿಜೆಪಿ ಸಹ ಕಾವೇರಿ ಭಾಗದಲ್ಲಿ ಹೋರಾಟ ನಡೆಸಲು ಮುಂದಾಗಿದ್ದು, ಹೋರಾಟದ ರೂಪುರೇಷೆ ಬಗ್ಗೆ ಬಿಜೆಪಿ ಮುಖಂಡರು ಸಭೆ ನಡೆಸಿದ್ದು, ಬಿಜೆಪಿ ಸಹ ನಾಳೆಯಿಂದ ಕಾವೇರಿ ಭಾಗದಲ್ಲಿ ಕಾವೇರಿ ಹೋರಾಟಕ್ಕೆ ಸಜ್ಜಾಗಿದೆ.ರಾಜ್ಯದಲ್ಲಿ ಅದರಲ್ಲೂ ಕಾವೇರಿ ಕೊಳ್ಳದಲ್ಲಿ ಮಳೆ ಕೈಕೊಟ್ಟಿದ್ದು, ಕೆಆರ್‌ಎಸ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ತಮಿಳುನಾಡಿಗೆ ನೀರು ಬಿಡುವ ಆದೇಶ ನೀಡಿದೆ. ಈ ಕ್ರಮ ವಿರೋಧಿಸಿ ರಾಜ್ಯದ ಹಲವೆಡೆ ನಡೆಯುತ್ತಿರುವ ಹೋರಾಟ ಪ್ರತಿಭಟನೆ ಮತ್ತಷ್ಟು ಕಾವು ಪಡೆದುಕೊಂಡಿದೆ.
ಇದೇ ವೇಳೆ ಸುಪ್ರೀಂಕೋರ್ಟಿನ ಆದೇಶ ವಿರೋಧಿಸಿ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತೊರೆಕಾಡಿನಹಳ್ಳಿ ಪಂಪ್ ಹೌಸ್‌ಗೆ ಪ್ರತಿಭಟನಾಕಾರರು ಗುತ್ತಿಗೆ ಹಾಕಿ, ಉಗ್ರ ಪ್ರತಿಭಟನೆ ನಡೆಸಿ, ಬೆಂಗಳೂರಿಗೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿ, ಬೆಳೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.
ಮತ್ತೊಂದೆಡೆ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ತಮಿಳುನಾಡಿಗೆ ನೀರು ಬಿಡುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ನಾಳೆ ಮಂಡ್ಯ ಬಂದ್
ತಮಿಳುನಾಡಿಗೆ ೧೫ ದಿನಗಳ ಕಾಲ ೫ ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಕ್ಕೆ ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಾಳೆ ಮಂಡ್ಯ ಜಿಲ್ಲಾ ಬಂದ್ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಬಂದ್ ಸಂಪೂರ್ಣ ಯಶಸ್ಸುಗೊಳಿಸಲು ಹಿತರಕ್ಷಣಾ ಸದಸ್ಯರು ಸಭೆ ಸೇರಿ, ಎಲ್ಲ ಕನ್ನಡ ಪರ ಸಂಘಟನೆಗಳು, ರೈತರು, ವಾಣಿಜ್ಯ ವಹಿವಾಟು ಬಂದ್ ಮಾಡಿ ಜಿಲ್ಲಾ ಬಂದ್‌ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.
ಕಾವೇರಿ ಕೊಳದಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಕುಡಿಯುವ ನೀರಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಆದರೂ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಗಳ ಬೆಂಬಲ
ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಆದಿಚುಂಚನಗಿರಿ ಮಠಾಧೀಶ ನಿiಲಾನಂದನಾಥ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿ ವಿವಿಧ ಮಠಾಧೀಶರೊಂದಿಗೆ ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಮಂಡ್ಯದಲ್ಲಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಆದಿಚುಂಚನಗಿರಿ ಶ್ರೀಗಳು ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಾಲಯ ಆದೇಶದಂತೆ ನಡೆದುಕೊಳ್ಳುವ ಸ್ಥಿತಿ ಎದುರಾಗಿದೆ. ವಸ್ತುಸ್ಥಿತಿಯ ಬಗ್ಗೆ ಸರ್ಕಾರ ಮನವರಿಕೆ ಮಾಡಬೇಕು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಮೇಕೆದಾಟು ಯೋಜನೆ ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರಿಗೆ ನೀರು ನಿಲ್ಲಿಸಲು ಆಗ್ರಹ
ರಾಜ್ಯದ ಎಲ್ಲೆಡೆ ಕಾವೇರಿ ಹೋರಾಟದ ಕಾವು ಜೋರಾಗುತ್ತಿರುವ ನಡುವೆ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವಂತೆ ಸುಪ್ರೀಂ ಆದೇಶ ಮತ್ತಷ್ಟು ಕಿಚ್ಚು ಹಚ್ಚಿದ್ದು, ಇಂದು ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ರೈತ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಇಂದು ಬೆಳಿಗ್ಗೆ ಮಳವಳ್ಳಿ ತಾಲ್ಲೂಕಿನ ತೊರೆ ಕಾಡನಹಳ್ಳಿ ಪಂಪ ಹೌಸ್‌ಗೆ ಪ್ರತಿಭಟನಾನಿರತರು ಮುತ್ತಿಗೆ ಹಾಕಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದಲ್ಲದೆ, ಬೆಂಗಳೂರಿಗೆ ನೀರು ನಿಲ್ಲಿಸಿ ಬೆಳೆಗೆ ನೀರು ಹರಿಸಲು ಆಗ್ರಹಿಸಿದರು.
ಮತ್ತೊಂದೆಡೆ ಬೆಂಗಳೂರು ಜನರಿಗೆ ಕಾವೇರಿ ನೀರು ಬೇಡವೇ ಬೇಡ. ಬೆಂಗಳೂರಿನ ಜನರಿಗೆ ಕಾವೇರಿ ನೀರು ಹರಿಸಬೇಡಿ. ಕಾವೇರಿ ನೀರು ಕುಡಿದು ಪ್ರತಿಭಟಿಸದವರಿಗೆ ನೀರು ಏಕೆ ಕೊಡ್ಬೇಕು ಎಂದು ತೊರೆ ಕಾಡನಹಳ್ಳಿ ನೀರು ಸಂಸ್ಕರಣ ಘಟಕದ ಬಳಿ ಪ್ರತಿಭಟನಾಕರಾರು ಘೋಷಣೆ ಕೂಗಿದರು.
ಈ ಕುರಿತು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಪ್ರತಿಕ್ರಿಯಿಸಿ, ಬರಿದಾಗಿರುವ ಕಾವೇರಿಗೆ ಬರದ ಶಾಸನ ಕೊಟ್ಟಿದ್ದಾರೆ. ಇದು ಮಾರಣಾಂತಿಕ ತೀರ್ಪು ಕೊಟ್ಟಿದ್ದಾರೆ. ಕಾವೇರಿ ಕೊಳ್ಳದ ಡ್ಯಾಮ್ ಗಳು ಬರಿದಾಗುತ್ತಿವೆ. ಮಳೆ ಬರದಿದ್ದರೇ ಬರ ಬರಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ, ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹಿನ್ನಲೆ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಅದರಂತೆ ವಿಜಯನಗರದ ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ಭೂತದಹನ ಮಾಡಿ ಆಕ್ರೋಶ ಹೊರಹಾಕಿದರು.

ಪರಂ ಎಚ್ಚರಿಕೆ
ಕಾವೇರಿ ನದಿ ನೀರು ಬಿಡುಗಡೆ ಕುರಿತಂತೆ ನಾಳೆ ಕರೆ ನೀಡಲಾಗಿರುವ ಮಂಡ್ಯ ಜಿಲ್ಲಾ ಬಂದ್ ವೇಳೆ ಕಾನೂನುಬಾಹಿರ ಚಟುವಟಿಕೆಗಳು ನಡೆದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಭಟನಾಕಾರರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಬಂದ್ ಕರೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೆಆರ್‌ಎಸ್ ಜಲಾಶಯಕ್ಕೂ ಭದ್ರತೆ ಒದಗಿಸಲಾಗಿದೆ. ಕೆಎಸ್‌ಆರ್‌ಪಿ, ಆರ್‌ಎಎಫ್ ತುಕಡಿಯನ್ನು ಹೆಚ್ಚುವರಿ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದರು.
ಪ್ರತಿಭಟನಾ ಸ್ಥಳದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ಕೊಡಬಾರದು, ಒಂದು ವೇಳೆ ಈ ರೀತಿ ನಡೆದುಕೊಂಡರೆ ಕಾನೂನುಕ್ರಮ ಅನಿವಾರ್ಯ ಎಂದು ಹೇಳಿದರು.