ಕಾವೇರಿಗೆ ಸಮಸ್ಯೆಗೆ ಶಾಶ್ವತ ಪರಿಹಾರ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.15:- ಕಾವೇರಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು ಹಾಗೂ ಮೇಕೆದಾಟು ಯೋಜನೆಯನ್ನು ಶೀಫ್ರವಾಗಿ ಆರಂಭಿಸಬೇಕೆಂದು ಒತ್ತಾಯಿಸಿ ಜೂ.15ರಂದು 11.30ಕ್ಕೆ ಮೇಕೆದಾಟಿನಲ್ಲಿ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಜಯಪ್ರಕಾಶ್(ಜೆಪಿ) ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ವಿಚಾರದಲ್ಲಿ ಅಲ್ಲಿನ ರಾಜಕಾರಣಿಗಳಿಗಿರುವ ಇಚ್ಛಾಶಕ್ತಿಯನ್ನು ಕರ್ನಾಟಕದ ರಾಜಕಾರಣಿಗಳಿಗೆ ಮನವರಿಕೆ ಮಾಡಿಕೊಡಲು ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಮೇಕೆದಾಟಿನಲ್ಲಿ ಧರಣಿ ನಡೆಸಲಾಗುತ್ತಿದೆ ಎಂದರು.
ಅಂದು ಬೆಳಗ್ಗೆ 8.30ಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಎಲ್ಲಾ ಹೋರಾಟಗಾರರು ಎರಡು ವಾಹನಗಳಲ್ಲಿ ಮೇಕೆದಾಟಿಗೆ ತೆರಳಿ 11.30ರಿಂದ 1.30ರವರೆಗೆ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಮೇಕೆದಾಟು ಯೋಜನೆಗೆ ಬೇಕಾದ ಅನುಮತಿ ಪಡೆಯಲು ಮತ್ತು ಯೋಜನೆ ಪ್ರಾರಂಭಿಸಲು ಕಾರ್ಯ ಪ್ರವೃತ್ತರಾಗಬೇಕೆಂದು ಹಾಗೂ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕಾವೇರಿ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸಬೇಕೆಂದು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೂಗೂರು ನಂಜುಂಡಸ್ವಾಮಿ, ಎಂ.ಜೆ.ಸುರೇಶ್‍ಗೌಡ, ತೇಜಸ್ ಲೋಕೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.