ಕಾಳಿಕಾಂಭ ದೇಗುಲದ ಜೀರ್ಣೋದ್ಧಾರ ಟ್ರಸ್ಟ್ ಸಭೆ

ಕೊರಟಗೆರೆ, ನ. ೭- ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ಶ್ರೀ ಕಾಳಿಕಾಂಭ ದೇವಾಲಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಶ್ರೀ ಕಾಳಿಕಾಂಭ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ ಪ್ರಥಮ ಸರ್ವ ಸದಸ್ಯರ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಳಿಕಾಂಭ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಎಂ.ಎನ್. ಶ್ರೀನಿವಾಸಾಚಾರ್ ಮಾತನಾಡಿ, ಪುರಾತನ ಕಾಲದ ಸುಮಾರು ೧೫೦ ವರ್ಷ ಹಿಂದೆ ಸ್ಥಾಪನೆಗೊಂಡಿರುವ ಶ್ರೀ ಕಾಳಿಕಾಂಭ ದೇವಾಸ್ಥಾನ ಅಭಿವೃದ್ದಿಯಾಗದೇ ನೆನೆಗುದಿಗೆ ಬಿದ್ದಿದ್ದು, ಇಂತಹ ಇತಿಹಾಸ ಪ್ರಸಿದ್ದವಾದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಸಲುವಾಗಿ ವಿಶ್ವಕರ್ಮ ಬಂಧುಗಳ ಸಹಕಾರದಿಂದ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ ಎಂದರು.
ಈ ದೇವಸ್ಥಾನದ ಅವರಣದಲ್ಲಿ ಶ್ರೀ ವಿನಾಯಕ, ಈಶ್ವರ, ಕಾಳಿಕಾಂಭ, ಅಂಜನೇಯಸ್ವಾಮಿ, ಶ್ರೀ ನಂದಿಯಂತಹ ಪುರಾತನ ಕಾಲದ ವಿಗ್ರಹಗಳು ಈಗಲೂ ಜೀವಂತವಾಗಿವೆ. ಈ ದೇವಸ್ಥಾನವು ಪುರಾತನ ದೇವಸ್ಥಾನವಾಗಿರುವ ಕಾರಣ ಪ್ರಸ್ತತ ದೇವಸ್ಥಾನವು ತುಂಬಾ ಶಿಥಲವಾಗಿದ್ದು, ಈ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಸಾರ್ವಜನಿಕರು ಹಾಗೂ ಭಕ್ತರು ಹಣ ಹಾಗೂ ಕಟ್ಟಡದ ಸಾಮಗ್ರಿಗಳನ್ನು ನೀಡಿ ದೇವಸ್ಥಾನದ ಅಭಿವೃದ್ದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ತಾಲ್ಲೂಕಿನ ವಿಶ್ವಕರ್ಮ ಬಂಧುಗಳ ಸಹಕಾರದಿಂದ ದೇವಸ್ಥಾನದ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಉಪಾಧ್ಯಕ್ಷ ಪುರುಷೋತ್ತಮಾಚಾರ್, ಗೌರವಾಧ್ಯಕ್ಷರಾಗಿ ಎಸ್.ಎಲ್.ಎನ್.ಮಾರ್ತಿ, ಕಾರ್ಯದರ್ಶಿ ಎಸ್.ಎಲ್. ಕುಂಭಿನಾಗರಾಜು, ಖಜಾಂಚಿ ವಿ. ಗೋಪಿನಾಥ್, ಸಂಚಾಲಕರಾಗಿ ನರಸಿಂಹಮೂರ್ತಿ, ನಿರ್ದೇಶಕರಾಗಿ ರವಿಕುಮಾರ್, ಪ್ರಕಾಶ್‌ಚಾರ್, ವೀರಭದ್ರಾಚಾರ್ ರವರನ್ನು ಆಯ್ಕೆ ಮಾಡಲಾಯಿತು.