ಕಾಳಸಂತೆಯಲ್ಲಿ ರೆಮ್ಡೆಸಿವಿಯರ್ ಇಂಜೆಕ್ಷನ್ ಮಾರಾಟ ವಿರೋಧಿಸಿ ಪ್ರತಿಭಟನೆ

ಕಲಬುರಗಿ.ಏ.19:ಕೊರೋನಾ ರೋಗಿಯ ಜೀವ ಉಳಿಸಲು ಅಗತ್ಯವಿರುವ ಔಷಧಿಗಳಲ್ಲಿ ಒಂದಾದ ರೆಮ್‍ಡೆಸಿವಿಯರ್ ಇಂಜೆಕ್ಷನ್ ಕೊರತೆ ಕಾಡುತ್ತಿದೆ. ಕಾಳಸಂತೆಯಲ್ಲಿ ಈ ಔಷಧಿ ಮಾರಾಟವಾಗುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಇಂಜೆಕ್ಷನ್ ಸುತ್ತಮುತ್ತಲಿನ ದಲ್ಲಾಳಿಗಳ ಕಾಟ ತಪ್ಪಿಸಬೇಕು. ಕಾಳಸಂತೆ ತಪ್ಪಿಸಿ ಪಾರದರ್ಶಕವಾಗಿ ಎಲ್ಲರಿಗೂ ಈ ಇಂಜೆಕ್ಷನ್ ದೊರಕುವಂತೆ ಮಾಡಬೇಕು. ರಾಜ್ಯ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ಈ ವಿಚಾರದಲ್ಲಿ ಕಾರ್ಯತತ್ಪರವಾಗಬೇಕು. ಯುದ್ದೋಪಾದಿಯಲ್ಲಿ ಕಾಳಸಂತೆಕೋರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ನಿಜವಾದ ಬೆಲೆಗೆ ಇಂಜೆಕ್ಷನ್ ಜನತೆಗೆ ದೊರಕುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಿಟಿ ಸ್ಕ್ಯಾನ್‍ಗಳಲ್ಲಿ 10ಕ್ಕೂ ಮೇಲ್ಪಟ್ಟು ರೀಡಿಂಗ್ ಬಂದವರಿಗೆ ಮಾತ್ರ ರೆಮ್‍ಡೆಸಿವೀರ್ ಇಂಜೆಕ್ಷನ್ ಕೊಡಬೇಕು ಎಂಬುದು ಕೊರೋನಾ ಚಿಕಿತ್ಸೆಯ ಶಿಷ್ಠಾಚಾರವಾಗಿದೆ. ಆದಾಗ್ಯೂ, ಅನೇಕ ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್ ರೀಡಿಂಗ್ ಹತ್ತಕ್ಕಿಂತ ಕಮ್ಮಿ ಇದ್ದರೂ ಸಹ ರೆಮ್‍ಡೆಸಿವೀರ್ ಇಂಜೆಕ್ಷನ್ ಕೊಡಲಾಗುತ್ತಿದೆ. ಇದರಿಂದಲೂ ಅದರ ಕೊರತೆ ಕಾಡುವಂತಾಗಿದೆ. ಸಂಬಂಧಪಟ್ವವರು ಇಂತಹ ದುರ್ಬಳಕೆ ಮೇಲೆಯೂ ಸಹ ನಿಗಾ ಇಡಬೇಕು ಎಂದು ಅವರು ಆಗ್ರಹಿಸಿದರು.
ಕೋವಿಡ್ ಸೋಂಕಿತರಿಗೆ ನಗರದ ಆಸ್ಪತ್ರೆಗಳಲ್ಲಿ ಸರಿಯಾದ ಹಾಸಿಗೆಗಳ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಕೂಡಲೇ ಸಂಕಷ್ಟದಲ್ಲಿರುವ ಬಡ ರೋಗಿಗಳಿಗೆ ನೆರವಾಗಬೇಕು ಎಂದು ಅವರು ಒತ್ತಾಯಿಸಿದರು.
ಸಂಘಟನೆಯ ಕಾನೂನು ಘಟಕದ ಅಧ್ಯಕ್ಷ ಸಂಪತ್ ಜೆ. ಹಿರೇಮಠ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂತೋಷ್ ಚೌಧರಿ, ಅನಿಲ್ ಗಾಯಕವಾಡ್, ಕಲ್ಲಪ್ಪ ಧನ್ನಿ ಮುಂತಾದವರು ಪಾಲ್ಗೊಂಡಿದ್ದರು.