ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಪಡಿತರ ಅಕ್ಕಿ!

ದಾವಣಗೆರೆ,ಏ.30: ಬಡವರ ಹೊಟ್ಟೆ ತುಂಬಿಸಲಿಕ್ಕಾಗಿ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರದಾರರಿಗೆ ಉಚಿತ ಅಕ್ಕಿ ವಿತರಣೆ ಮಾಡುತ್ತಿದೆ. ಆದರೆ, ನ್ಯಾಯಬೆಲೆ ಅಂಗಡಿಯಲ್ಲಿ ಪುಕ್ಕಟೆ ಅಕ್ಕಿ ಪಡೆಯುವ ಫಲಾನುಭವಿಗಳು 12ರಿಂದ 15 ರೂ.ಗೆ ಕೆಜಿಯಂತೆ ಅಕ್ಕಿ ಮಾರಾಟ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಹೌದು… ಅನ್ನ ಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಫಲಾನುಭವಿಗಳ ಬಿಪಿಎಲ್ ಚೀಟಿಯನ್ನು ಆರು ತಿಂಗಳು ರದ್ದು ಮಾಡುವ ಕಾನೂನನ್ನು ಸರ್ಕಾರ ಜಾರಿಗೆ ತಂದಿದ್ದರು. ಕಾಳ ಸಂತೆಯಲ್ಲಿ ಫಲಾನುಭವಿಗಳು ಪುಕ್ಕಟೆ ಪಡೆದ ಅಕ್ಕಿಯನ್ನು 12ರಿಂದ 15 ರೂ.ಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ನೀಡಿದಾಕ್ಷಣ ಬೀದಿ, ಬೀದಿಗೂ ಆಟೋರೀಕ್ಷಾಗಳಲ್ಲಿ ಬರುವ ಖರೀದಿದಾರರು, ರಾಜಾರೋಷವಾಗಿ ಅಕ್ಕಿ ಕೊಡ್ತಿರೆನಮ್ಮಾ ಅಕ್ಕಿ ಅಂತಾ ಕೂಗುತ್ತಾ ಬರುತ್ತಾರೆ. ಇದನ್ನು ಕಂಡ ಪಡಿತರ ಫಲಾನುಭವಿಗಳು ತಾವು ತಂದಿರುವ ಅಕ್ಕಿಯನ್ನು ಖರೀದಿದಾರರಿಗೆ ಕೊಟ್ಟು ಹಣ ಪಡೆಯುವುದು ನಗರದಲ್ಲಿ ಕಂಡು ಬರುತ್ತಿದೆ.
ಹೀಗೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಖರೀದಿಸುವ ಕಾಳಸಂತೆಕೋರರು, ತಾವು ಖರೀದಿಸಿದ ಅಕ್ಕಿಯನ್ನು ಬೆಣ್ಣೆ ದೋಸೆ, ಫಡ್ಡು, ಇಡ್ಲಿ, ಹಪ್ಪಳ ತಯಾರಿಸುವವರಿಗೆ 20ರಿಂದ 25 ರೂ.ಗಳಂತೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಇದೇ ಅಕ್ಕಿಯನ್ನು ಪಾಲೀಶ್ ಹಾಕಿಸಿ ಹೊಲ್‌ಸೆಲ್ ಅಕ್ಕಿ ಮಾರಾಟಗಾರರಿಗೆ ಮಾರಾಟ ಮಾಡುತ್ತಿರುವ ಜಾಲ ನಗರದಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ.
ಇದೆಲ್ಲದರ ಮಾಹಿತಿ ಇದ್ದರೂ ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆಯ ಅಧಿಕಾರಿಗಳು ಕಂಡು ಕಾಣದಂತೆ ಜಾಣಕುರುಡು ಅನುಸರಿಸುತ್ತಿದ್ದಾರೆ. ಇನ್ನೂ ಪೊಲೀಸರು ಅಲ್ಲೋ, ಇಲ್ಲೋ ಪಡಿತರ ಅಕ್ಕಿ ಸೀಜ್ ಮಾಡಿರುವ ಕೇಸ್ ಹಾಕಿ ಕೈತೊಳೆದುಕೊಳ್ಳುತ್ತಿದ್ದಾರೆ.