ಕಾಳಸಂತೆಯಲ್ಲಿ ಕೊರೊನಾ ಲಸಿಕೆ ವೈದ್ಯರಿಗೆ ಬಿಟ್ ಕಾಯಿನ್ ಆಮಿಷ


ಬೆಂಗಳೂರು, ಜ.೧೨- ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸಿದ್ದತೆಗಳು ನಡೆಯುತ್ತಿರುವಾಗಲೇ ರಾಜ್ಯದ ವಿಐಪಿಗಳು (ಅತಿ ಗಣ್ಯರು) ಲಸಿಕೆಗಾಗಿ ಬಿಟ್ ಕಾಯಿನ್ ನೀಡುವುದಾಗಿ ವೈದ್ಯರಿಗೆ ಆಫರ್ ನೀಡುತ್ತಿರುವ ಸಂಗತಿ ಬಯಲಾಗಿದೆ.
ಅತಿ ಗಣ್ಯರು ಹಾಗೂ ಹಣವಂತರು ಲಸಿಕೆಯನ್ನು ಪಡೆಯಲು ಬಿಟ್ ಕಾಯಿನ್ ನೀಡುವುದಾಗಿ ಆಫರ್ ಮಾಡಿದ್ದಾರೆ ಎನ್ನುವ ಸಂಗತಿಯನ್ನು ವೈದ್ಯರು ಹೊರಹಾಕಿದ್ದಾರೆ.
ವಿಐಪಿ ಕೊರೊನಾ ಸೋಂಕಿತರು ಲಸಿಕೆ ಪಡೆಯಲು ಇಂತಹ ಆಫರ್ ವೈದ್ಯರಿಗೆ ನೀಡಲಾಗಿದ್ದು, ಕೆಲ ವಿತರಕರ ಮೂಲಕವೂ ಪಡೆಯಲು ಮುಂದಾಗಿದ್ದಾರೆ ಎನ್ನುವ ಸಂಗತಿ ಬಯಲಾಗಿದೆ.ಕಾಳಸಂತೆಯಲ್ಲಿ ಲಸಿಕೆ ಪಡೆಯುವ ಅತಿಗಣ್ಯರ ಬೇಡಿಕೆಯನ್ನು ಅನೇಕ ವೈದ್ಯರು ತಿರಸ್ಕರಿಸಿರುವುದಾಗಿ ಹೆಸರು ಹೇಳಲು ಇಚ್ಚಿಸದ ವೈದ್ಯರು ತಿಳಿಸಿದ್ದಾರೆ
ಕಾಳ ಸಂತೆಯಲ್ಲಿ ಲಸಿಕೆ
ಈ ತಿಂಗಳ ೧೬ರಿಂದ ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣಾ ಕಾರ್ಯ ಕ್ರಮ ನಡೆಯಲಿದೆ. ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಪಡೆಯ ಕಾರ್ಯಕರ್ತರಿಗೆ ನೀಡಲು ಉದ್ದೇಶಿಸಲಾಗಿದೆ. ಶ್ರೀಮಂತರು ಲಸಿಕೆಯನ್ನು ಕಾಳಸಂತೆಯಲ್ಲಿ ಮುಂಚಿತವಾಗಿಯೇ ಪಡೆಯಲು ಮುಂದಾಗಿದ್ದಾರೆ.
ಅತಿಗಣ್ಯ ಕೊರೊನಾ ಸೋಂಕಿತ ರೋಗಿಗಳು ಹೇಗಾದರೂ ಮಾಡಿ ಲಸಿಕೆಯನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ವಿತರಕರು, ವೈದ್ಯರನ್ನು ಸಂಪರ್ಕ ಮಾಡಿ ಲಸಿಕೆ ಪಡೆಯಲು ಮುಂದಾಗಿದ್ದಾರೆ ಎನ್ನುವ ಸಂಗತಿ ಬಯಲಾಗಿದೆ.
ಕೊರೊನಾ ಲಸಿಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ವಿಷಯವನ್ನು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳ ಸಂಘ- ಫನಾ ಖಚಿತಪಡಿಸಿದೆ.
ಕೊರೊನಾ ಲಸಿಕೆಗಾಗಿ ಅನೇಕ ಆಫರ್ ಗಳನ್ನು ಅತಿಗಣ್ಯರು ಮುಂದಿಡುತ್ತಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಲಸಿಕೆ ಬಳಕೆಗೆ ಪೂರ್ಣಪ್ರಮಾಣದಲ್ಲಿ ಇನ್ನೂ ಅನುಮತಿ ನೀಡಿಲ್ಲ. ಇಂತಹ ಸಮಯದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುವ ವಿಷಯ ಬೆಚ್ಚಿಬೀಳಿಸಿದೆ ಎಂದು ಬೆಂಗಳೂರಿನ ಹಿರಿಯ ವೈದ್ಯರು ತಿಳಿಸಿದ್ದಾರೆ.
ಫನ ಅಧ್ಯಕ್ಷ ಡಾ. ಎಚ್ ಎಂ ಪ್ರಸನ್ನ ಪ್ರತಿಕ್ರಿಯಿಸಿ, ಲಸಿಕೆ ಪಡೆಯಲು ಬಿಟ್-ಕಾಯಿನ್ ನೀಡಲಾಗುವುದು ಎಂದು ಅನೇಕ ಸಿರಿವಂತರು ಬೇಡುತ್ತಿರುವುದು ಕಾನೂನುಬಾಹಿರವಾದ ಕೆಲಸ. ಇದು ಸರಕಾರದ ನಿಯಮಾವಳಿಗಳಿಗೆ ವಿರುದ್ಧವಾದುದು ಎಂದು ತಿಳಿಸಿದ್ದಾರೆ.
ವಿಐಪಿ ಕೊರೊನಾ ಸೋಂಕಿತರಿಂದ ಲಸಿಕೆಗಾಗಿ ವಿವಿಧ ಆಮಿಷಗಳು ಬರುತ್ತಿರುವುದು ವೈದ್ಯರನ್ನು ಕಂಗಾಲಾಗಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಪಕ್ಷದ ಮಹಾನಿಯಂತ್ರಕ ಅಗತ್ಯ ಕ್ರಮ ಕೈಗೊಳ್ಳುವ ತುರ್ತು ಅಗತ್ಯವಿದೆ ಎಂದು ಹೇಳಲಾಗಿದೆ