ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.7 :- ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರ ಧಾನ್ಯ ಸಾಮಗ್ರಿಗಳನ್ನು ಅಂಗನವಾಡಿ ಹೆಲ್ಪರ್ ಕಾಳಸಂತೆಯಲ್ಲಿ ಮಾರಾಟ ಮಾಡಲು ಹೋಗಿ ಗ್ರಾಮಸ್ಥರಿಗೆ ಸಿಕ್ಕಿಬಿದ್ದ ಘಟನೆ ಸೋಮವಾರ ಗೋವಿಂದಗಿರಿ ತಾಂಡಾದಲ್ಲಿ ಜರುಗಿದ್ದು ಮಂಗಳವಾರ ಸ್ಥಳ ಪರಿಶೀಲನೆ ಮಾಡಿದ ಅಂಗನವಾಡಿ ಮೇಲ್ವಿಚಾರಕರು ನೀಡಿದ ವರದಿಯಂತೆ ಕೂಡ್ಲಿಗಿ ಸಿಡಿಪಿಒ ಮೇಲಧಿಕಾರಿಗಳಿಗೆ ಅಮಾನತ್ತಿನ ಶಿಫಾರಸ್ಸು ಪತ್ರ ಬರೆದು ಕಳುಹಿಸಿದ್ದಾರೆಂದು ತಿಳಿದಿದೆ.
ಗೋವಿಂದಗಿರಿ ತಾಂಡಾದ ಅಂಗನವಾಡಿ ಎ ಕೆಂದ್ರದ ಸಹಾಯಕಿ ಜ್ಯೋತಿಭಾಯಿ ಎನ್ನುವವರು ಅಂಗನವಾಡಿ ಕಾರ್ಯಕರ್ತೆ ಗಮನಕ್ಕೂ ಬಾರದೆ ಸೋಮವಾರ ಅಂಗನವಾಡಿಯ ಕಡ್ಲೆಕಾಳು, ಶೇಂಗಾಬೀಜ, ಗೋಧಿನುಚ್ಚು ಹಾಗೂ ಪುಷ್ಠಿಯನ್ನು ತೆಗೆದುಕೊಂಡು ಕಾಳಸಂತೆಯಲ್ಲಿ ಮಾರಾಟಮಾಡಲು ತೆಗೆದುಕೊಂಡು ಹೋಗುವಾಗ ಗ್ರಾಮದ ಕುಮಾರನಾಯ್ಕ್ ಹಾಗೂ ಗೋವಿಂದನಾಯ್ಕ್ ಎನ್ನುವವರು ಬೆನ್ನತ್ತಿ ವಿಡಿಯೋ ಸಮೇತ ಚಿತ್ರೀಕರಣ ಮಾಡಿ ಸಿಡಿಪಿಒ ಕಚೇರಿಗೆ ನೀಡಿದ ದೂರಿನಂತೆ ಮತ್ತು ಮಂಗಳವಾರ ಅಂಗನವಾಡಿ ಹಿರಿಯ ಮೇಲ್ವಿಚಾರಕರ ಹಾಗೂ ವೃತ್ತ ಪ್ರಭಾರಿ ಮೇಲ್ವಿಚಾರಕರ ವರದಿಯನ್ನು ಆಧಾರಿಸಿ ಕೂಡ್ಲಿಗಿ ಸಿಡಿಪಿಒ ನಾಗನಗೌಡ ಪಾಟೀಲ್ ಅವರು ಅಮಾನತ್ತಿಗೆ ಶಿಫಾರಸ್ಸು ಪತ್ರವನ್ನು ತಮ್ಮ ಮೇಲಾಧಿಕಾರಿಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದಿದೆ.
ಮೇಲ್ವಿಚಾರಕರು ಬಂದ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿಯ ವಿರುದ್ಧ ಪಂಪನಾಯ್ಕ್, ಗೋವಿಂದನಾಯ್ಕ್, ಕುಮಾರನಾಯ್ಕ್, ಗೋಪಾಲನಾಯ್ಕ್, ಉಮೇಶನಾಯ್ಕ್, ಕುಬೇರನಾಯ್ಕ್, ರಮೇಶನಾಯ್ಕ್, ಶಂಭುನಾಯ್ಕ್, ಸಂಧ್ಯಾಭಾಯಿ, ವೀಣಾ ಸಂಗೀತ ಮಾಹಿತಿ ನೀಡಿದರು ಪ ಪಂ ಸದಸ್ಯ ಬಾಸುನಾಯ್ಕ್ ಇತರರು ಇದ್ದರು.