ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಅಹವಾಲು ಆಲಿಸಿದ ರಾಜೇಂದ್ರ

ಮಧುಗಿರಿ, ಆ. ೬- ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಜಯಮಂಗಲಿ ನದಿ ಹರಿದು ನಾಲ್ಕೈದು ಗ್ರಾಮಗಳು ಮುಳುಗಡೆಯಾಗಿದ್ದ ಸ್ಥಳಗಳಿಗೆ ಮತ್ತು ಕಾಳಜಿ ಕೇಂದ್ರಕ್ಕೆ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಭೇಟಿ ನೀಡಿ ಸಂತ್ರಸ್ತರ ಕಷ್ಟಗಳನ್ನು ಆಲಿಸಿದರು.
ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮದ ಸರ್ವೋದಯ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗಳನ್ನು ಪರಿಶೀಲಿಸಿದ ನಂತರ ಸೂರನಾಗೇನಹಳ್ಳಿ ಗ್ರಾಮಕ್ಕೆ ತೆರಳಿ ಮಳೆಯ ಅವಾಂತರದ ಜತೆಗೆ ಜಯಮಂಗಲಿ ನದಿ ನೀರು ಊರೊಳಗೆ ನುಗ್ಗಿ ಶಾಲಾ ಆವರಣ ನೀರಿನಿಂದ ಮುಳುಗಡೆಯಾದ ಪ್ರದೇಶ ಮತ್ತು ಗ್ರಾಮದ ಪ್ರತಿ ಮನೆ ಮನೆಗೂ ಭೇಟಿ ನೀಡಿ ಹಾನಿಯ ಬಗ್ಗೆ ಖುದ್ದು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಡಿಗೆನಹಳ್ಳಿ ವ್ಯಾಪ್ತಿಯಲ್ಲಿ ರೈತರು ಬೆಳೆ ಬೆಳೆಯುವುದೇ ಸಾಹಸವಾಗಿದ್ದು ಇಂಥ ಸಂದರ್ಭದಲ್ಲಿ ಅಪಾರವಾದ ಬೆಳೆ ನಷ್ಟ ಉಂಟಾಗಿರುವುದರಿಂದ ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ನಡೆಯುವ ಕಲಾಪದಲ್ಲಿ ಸರ್ಕಾರದ ಗಮನ ಸೆಳೆದು ಸೂಕ್ತ ಪರಿಹಾರ ಕೊಡಿಸುವ ಬಗ್ಗೆ ಭರವಸೆ ನೀಡಿದರು.
ಸೂರ ನಾಗೇನಹಳ್ಳಿಯ ನಲವತ್ತು ಕುಟುಂಬಗಳು ಕಾಳಜಿ ಕೆಂದ್ರದಲ್ಲಿ ಆಶ್ರಯ ಪಡೆದಿದ್ದು, ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಭಾಗದಲ್ಲಿ ಹಲವು ಕಾಲುವೆಗಳ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಗ್ರಾಮಸ್ಥರು ದೂರಿದಾಗ ಈ ಬಗ್ಗೆ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರಿಗೆ ಒತ್ತುವರಿ ತೆರವಿಗೆ ಸೂಚಿಸಲಾಗುವುದು ಎಂದರು.
ಜಯಮಂಗಲಿ ನದಿ ನೀರು ಸೂರನಾಗೇನಹಳ್ಳಿ ಗ್ರಾಮದೊಳಗೆ ನುಗ್ಗಿದ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂರನಾಗೇನಹಳ್ಳಿ ಅಶ್ವತ್ಥನಾರಾಯಣ ಹಾಗೂ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಜೆ.ಡಿ. ವೆಂಕಟೇಶ್ ಅವರು ಜೆಸಿಬಿಗಳನ್ನು ಕರೆಸಿ ಗ್ರಾಮದಿಂದ ನೀರು ಹೊರ ಹೋಗಲು ಕಾಲುವೆ ಮಾಡಿಸಿದ ನಂತರ ರಸ್ತೆಯಲ್ಲಿ ಹರಿಯುವ ನೀರಿನಲ್ಲೇ ಅಲ್ಲಿನ ನೆರೆ ಸಂತ್ರಸ್ಥರನ್ನು ಟ್ರ್ಯಾಕ್ಟರ್ ನಲ್ಲಿ ಸರ್ವೋದಯ ಕಾಲೇಜಿನಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸಾಗಿಸಿದ ಕಾರ್ಯದ ಬಗ್ಗೆ ಇದೇ ಸಂದರ್ಭದಲ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶ್ವತ್ಥನಾರಾಯಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜೆ.ಡಿ. ವೆಂಕಟೇಶ್, ಮುಖಂಡರಾದ ಆದಿನಾರಾಯಣರೆಡ್ಡಿ, ಡಿ.ಟಿ. ಸಂಜೀವಮೂರ್ತಿ, ಪಂಚಾಕರಯ್ಯ, ಶಾಮೀರ್, ವೆಂಕಟೇಶ್ , ರಂಗನಾಥ್ , ಪೀರ್ ಅಹಮದ್, ಕಾಂತರಾಜು, ಭಾಸ್ಕರ್, ಎಲ್. ರಾಮಯ್ಯ, ತಿಮ್ಮರಾಜು, ಬಾಲಾಜಿ, ನ್ಯಾತಪ್ಪ, ಸೂರನಾಗೇನಹಳ್ಳಿ ಸಿದ್ದಪ್ಪ, ಮಂಜುನಾಥ್, ನಾಗರೆಡ್ಡಿ ಇದ್ದರು.