ಕಾಳಗಿ: ಎಲ್ಲಾ ಹಳ್ಳಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಲು ಒತ್ತಾಯ

ಕಾಳಗಿ,ಜು.27-ತಾಲೂಕಿನಲ್ಲಿರುವ ಬಸ್ಸಿನ ಸಮಸ್ಯೆಯನ್ನು ಪರಿಹರಿಸಲು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎ.ಐ.ಡಿ.ಎಸ್.ಓ) ವಿದ್ಯಾರ್ಥಿ ಸಂಘಟನೆಯ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎ.ಐ.ಡಿ.ಎಸ್.ಓ ತಾಲೂಕು ಸಮಿತಿ ಅಧ್ಯಕ್ಷೆ ಶಿಲ್ಪಾ ಬಿ.ಕೆ. ಅವರು ಮಾತನಾಡಿತ್ತ, ಕಾಳಗಿ ನಗರವು ಶೈಕ್ಷಣಿಕ ಕೇಂದ್ರ ಬಿಂದುವಾಗಿದೆ. ಸುಮಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಕನಸು ಹೊತ್ತು, ಶಾಲಾ-ಕಾಲೇಜು ಶಿಕ್ಷಣ ಅರಸಿ ಸಾವಿರಾರು ಸಂಖ್ಯೆಯಲ್ಲಿ ನಗರಕ್ಕೆ ಬರುತ್ತಾರೆ. ಸರಕಾರಿ ಬಸ್ ಸೌಲಭ್ಯಗಳಿಲ್ಲದೇ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಮೈಲುಗಟ್ಟಲೆ ಕಾಲ್ನಡಿಗೆ ಮೂಲಕ ಅಥವಾ ಖಾಸಗಿ ವಾಹನಗಳಿಗೆ ದಿನಕ್ಕೆ ನೂರಾರು ರೂಪಾಯಿ ವ್ಯಯಿಸಿ ನಗರಕ್ಕೆ ಬರಬೇಕಾಗಿದೆ. ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ತರಗತಿಗಳಿಗೆ ತಡವಾಗಿ ಬಂದು ಗೈರು ಹಾಜರಾಗುವಂತಾಗಿದೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ಬಾರಿ ತಹಸೀಲ್ದಾರರು ಹಾಗೂ ಸಾರಿಗೆ ಇಲಾಖೆಯ ಗಮನಕ್ಕೆ ತಂದರೂ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದರು.
ಮುಂದುವರೆದು ಮಾತನಾಡಿದ ಅವರು ಕೆಲವು ಹಳ್ಳಿಗಳಿಗೆ ಬಸ್ ಸೌಲಭ್ಯ ಇದ್ದರೂ ಕೂಡಾ ಸರಿಯಾದ ಸಮಯಕ್ಕೆ ಬಸ್‍ಗಳು ಬರುವುದಿಲ್ಲ. ನೂರಾರು ರೂಪಾಯಿ ಕೊಟ್ಟು ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಕೊಂಡರೂ ಅನೇಕ ಎಕ್ಸಪ್ರೆಸ್ ಬಸ್‍ಗಳಲ್ಲಿ ಪ್ರಯಾಣಿಸಲು ಬಿಡುತ್ತಿಲ್ಲ. ವಿದ್ಯಾರ್ಥಿಗಳ ಶಾಲಾ ಕಾಲೇಜುಗಳ ಸಮಯಕ್ಕನುಗುಣವಾಗಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದ ಹಾಗೆ ಶಾಶ್ವತ ಪರಿಹಾರವೆಂಬಂತೆ ಈಗಲಾದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕುಡಳ್ಳಿ, ಕೊರವಿ, ರುಮ್ಮನ್ ಗೂಡ್, ಸಾಸರ್ ಗಾಂವ್, ಕಲಗುರ್ತಿ, ಸೂಗೂರ್, ಸೂಗೂರ್ ಥಾಂಡಾ, ಮಲಘಾಣ್, ಲಕ್ಷ್ಮಣ ನಾಯಕ್ ಥಾಂಡಾ, ಸುಬ್ಬುನಾಯಕ್ ಥಾಂಡಾ, ಅರೆ ಜಂಬಗಾ, ಚಿಂಚೋಳಿ ಎಚ್, ಹಲಚೇರಾ ಸೇರಿದಂತೆ ಹಲವು ಹಳ್ಳಿಗಳಿಗೆ ಕೂಡಲೇ ಸಾರಿಗೆ ವ್ಯವಸ್ಥೆಯನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆ.ಕೆ.ಆರ್.ಟಿ.ಸಿ ಅಧಿಕಾರಿಗಳು ಒಂದು ವಾರದಲ್ಲಿ ಎಲ್ಲಾ ಸಮಸ್ಯೆಗಳನ್ನು ಪರಿಹಾರಿಸುವುದಾಗಿ ಭರವಸೆ ನೀಡಿದರು. ಈ ಹೋರಾಟದಲ್ಲಿ ಸಂಘಟನೆಯ ಉಪಾಧ್ಯಕ್ಷÀ ಕೃಷ್ಣಾ ಕುಡಳ್ಳಿ, ಸದಸ್ಯರಾದ ಅಭಿ, ವಿಲಾಸ್, ಆನಂದ್, ಅಂತೋಷ್, ಪ್ರಜ್ವಲ್, ಅಮೂಲ್ಯ, ಭಾಗ್ಯ ಸೇರಿದಂತೆ ಇನ್ನಿತರ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.