ಕಾಳಗಿಯಲ್ಲಿ ಕಾಮದಹನ ಮಾಡಿ ಸಂಭ್ರಮದ ಹೋಳಿ ಆಚರಣೆ

ಕಾಳಗಿ. ಮಾ 30 : ಸನಾತನ ಹಿಂದೂ ಧರ್ಮದ ಸಾಂಪ್ರದಾಯಿಕ ಹಬ್ಬವಾಗಿರುವ ಹೋಳಿ ಹಬ್ಬವನ್ನು ರವಿವಾರ ಪಟ್ಟಣದಾಧ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾಳಗಿ ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಮೀಸಲು ಆಚರಣೆಯಾಗಿ ಮಾಡುವುದರಿಂದ ಶನಿವಾರ ಹೋಳಿ ಹುಣ್ಣಿಮೆಯೆಂದು ವಿವಿಧೆಡೆಗಳಲ್ಲಿ ರಾತ್ರಿ ವೇಳೆ ಕಾಮದಹನ ಮಾಡಿದರು.
ರವಿವಾರ ಬೆಳಿಗ್ಗೆ ವಿವಿಧ ಪ್ರಕಾರದ ರಂಗು-ರಂಗಿನ ಬಣ್ಣಗಳಲ್ಲಿ ಮಿಂದೆದ್ದು, ಸಂಭ್ರಮಾಚರಣೆ ಮಾಡಿದರು.
ಜೈಶಂಕರ್ ಮಾಲಿಪಾಟೀಲ ಮನೆತನದಿಂದ ಶನಿವಾರ ರಾತ್ರಿ ಚಂದ್ರಕಾಂತ ಜಮಾದಾರ ಅವರು ಕೊಬ್ಬರಿ, ಹೋಳಿಗೆಗಳನ್ನು ತೆಗೆದುಕೊಂಡು ಫುಂಡಿ ಕಟ್ಟಿಗೆಯಿಂದ ಉರಿಯುತ್ತಿರುವ ಬೆಂಕಿಯನ್ನು ಹಿಡಿದುಕೊಂಡು, ಹಳ್ಳದ ರಸ್ತೆಯಿಂದ ಹಳೆ ಹನುಮಾನ ದೇವಸ್ಥಾನದ, ಬನಶಂಕರಿ ದೇವಸ್ಥಾನ, ಪಲ್ಯಕಟ್ಟೆ, ಕಾಳಮ್ಮ ದೇವಿ ದೇವಸ್ಥಾನ, ಪಂಚಾಳ ಕಟ್ಟೆ, ಘಾಳಿ ಮಾರೇಮ್ಮ ದೇವಿ, ಮುತ್ಯಾನ ಕಟ್ಟೆ, ದೌಲಪ್ಪ ಮುತ್ಯಾನ ದೇವಸ್ಥಾನದ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಾಂಪ್ರದಾಯಿಕ ಕಾಮದಹನ ಮಾಡಲಾಯಿತು.
ಕಾಮದಹನ ಮಾಡಿರುವ ಸ್ಥಳಗಳ ಅಗ್ನಿಯಲ್ಲಿ ರವಿವಾರ ಮಹಿಳೆಯರು ಸೇರಿಕೊಂಡು ಕಡಲೆಕಾಳುಗಳನ್ನು ಹುರಿದು ತಿನ್ನುತ್ತಾ, ಅಗ್ನಿ ದೇವನಿಗೆ ನಮಿಸಿ ಧನ್ಯರಾದರು.
ದುಷ್ಟಗುಣಗಳನ್ನು ಸುಟ್ಟು ಹಾಕಿ ಶಿಷ್ಟ ಗುಣಗಳನ್ನು ಆಚರಣೆಗೆ ತರುವ ಸಂಕೇತವಾಗಿರುವ ಹೋಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕೊರೋನಾತಂಕದಿಂದ ಕೆಲವರು ಮನೆಯಲ್ಲೇ ಹೋಳಿ ಆಚರಣೆ ಮಾಡಿದರೆ ಇನ್ನೂ ಕೆಲವರು ಊರಿನ ಸಾವಾಸವೇ ಬೇಡವೆಂದು ದೂರ-ದೂರದ ಹೊಲಗಳಿಗೆ ತೆರಳಿ ಬಾಡೂಟ ಸಿದ್ಧಪಡಿಸಿಕೊಂಡು, ವೈನ್ಸ್ ಗಳು ಬಂದ್ ಮಾಡಿದ್ದರೂ ಕೂಡ ಮಧ್ಯೆ ಸೇವನೆ ಮಾಡಿ, ಹೊಲಗಳಲ್ಲಿಯೇ ಜೂಜಾಟವಾಡಿ ಮೋಜು ಮಸ್ತಿ ಮಾಡುತ್ತಾ ಹಬ್ಬ ಆಚರಣೆ ಮಾಡಿದರೆ, ಪುಟ್ಟ ಬಾಲಕರು ಸೇರಿಕೊಂಡು ಗ್ರಾಮಗಳಲ್ಲಿ ಪರಸ್ಪರ ಬಣ್ಣ ಎರಚಿ ಕೊಂಡು ಸಂಭ್ರಮಿಸಿದರು.
ಇನ್ನೂ ಹಣವಂತರು ಹೋಳಿ ಹಬ್ಬದ ಟೂರ್ ಏರ್ಪಡಿಸಿಕೊಂಡು ಡಾಂಡೇಲಿಯಂತಹ ನಗರಗಳಿಗೆ ಪ್ರವಾಸ ಬೆಳೆಸಿದರು.
ಇಲ್ಲಿಯ ಬಜಾರ್ ಯೂನಿಯನ್ ನವರು ಸ್ವಯಂಘೋಷಿತವಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿರುವುದರಿಂದ ಕಾಳಗಿ ಸ್ತಬ್ಧವಾಗಿತ್ತು.
ಪಟ್ಟಣದ ವಿವಿಧೆಡೆಗಳಲ್ಲಿ ಸಿಪಿಐ ವಿನಾಯಕ ಚೌವ್ಹಾಣ ಅವರ ನೇತೃತ್ವದ ಪಿಎಸ್ಐ ದಿವ್ಯ ಮಹಾದೇವ ಅವರ ಪೋಲೀಸ್ ತಂಡ ಗಸ್ತು ಹೊಡೆದು ಯಾವುದೇ ಪ್ರಕಾರದ ಅಹಿತಕರ ಘಟನೆಗಳನ್ನು ನಡೆಯದಂತೆ ಬಂದೋಬಸ್ತ್ ಮಾಡಲಾಗಿತ್ತು.