ಕಾಲೇಜ್ ಹತ್ತಿರ ಬಸ್ ನಿಲ್ಲಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.5: ನಗರದಲ್ಲಿರುವ ಬಸ್‌ನಿಲ್ದಾಣದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು  ವಿವಿಧ ಕಡೆ ಹೊರಟಿದ್ದ ಬಸ್‌ಗಳನ್ನು ತಡೆದು ಪ್ರತಿಭಟನೆ ವ್ಯಕ್ತಪಡಿಸಿ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ವಿದ್ಯಾರ್ಥಿ ವಿಜಯ್ ಮಾತನಾಡಿ ನಮ್ಮ ಕಾಲೇಜು ನಗರದಿಂದ ನಾಲ್ಕು ಕಿ.ಮಿ. ದೂರವಿದೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ಗಳು ಕಾಲೇಜು ಹತ್ತಿರ ನಿಲ್ಲಿಸುವುದಿಲ್ಲ, ಖಾಲಿ ಬಸ್‌ಗಳು ಸಂಚರಿಸುತ್ತಿದ್ದರೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೆ ಹಾಗೇ ಹೋಗುತ್ತಾರೆ, ಅಲ್ಲದೆ ವಿವಿಧ ಗ್ರಾಮಗಳಿಂದ ಬಂದ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ನಿಲ್ದಾಣದಲ್ಲಿ ಬಸ್‌ನಲ್ಲಿ ಹತ್ತಲು ನಿರ್ವಾಹಕರು ಕಾಲೇಜು ಹತ್ತಿರ ನಮ್ಮ ಬಸ್ ನಿಲ್ಲುವುದಿಲ್ಲ, ಹಳ್ಳಿಕಡೆ ಹೋಗುವ ಬಸ್‌ಗಳನ್ನು ಹತ್ತಿ ಕಾಲೇಜಿಗೆ ಹೋಗಿ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಕಾಲೇಜಿಗೆ ತೆರಳಲು ಅನಾನುಕೂಲವಾಗುತ್ತಿದೆ.  ಕಾಲೇಜಿನ ವಿದ್ಯಾರ್ಥಿಗಳಿಗೆ ಹೋಗಿ ಬರಲು ಬಸ್ ವ್ಯವಸ್ಥೆ ಮಾಡಿ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ, ಆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಆಕ್ರೋಷ ವ್ಯಕ್ತಪಡಿಸಿದರು.
ವಿಧ್ಯಾರ್ಥಿನಿ ಮಂಜುಶ್ರೀ ಮಾತನಾಡಿ ಕಾಲೇಜಿಗೆ ತೆರಳಲು ಬಸ್‌ನಿಲ್ದಾಣದಲ್ಲಿ ನಿರ್ವಾಹಕರು ಕಿರಿ ಕಿರಿ ಮಾಡುತ್ತಾರೆ, ಕಾಲೇಜಿನಿಂದ ನಮ್ಮ ಗ್ರಾಮಗಳಿಗೆ ತೆರಳಲು ಕಾಲೇಜು ಹತ್ತಿರ ನಾವು ಕೈ ಎತ್ತಿದರೆ ಬಸ್‌ಗಳನ್ನು ನಿಲ್ಲಿಸದೇ ಹಾಗೇ ಹೊರಟು ಹೋಗುತ್ತಾರೆ.  ಇದರಿಂದಾಗಿ ಪ್ರತಿನಿತ್ಯವೂ ಕಾಲೇಜಿಗೆ ಹೋಗಿ ಬರಲು ತೀವ್ರ ಸಮಸ್ಯೆ ಉಂಟಾಗುತ್ತಿದೆ, ಆದ್ದರಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಹೋಗಿ ಬರಲು ಬಸ್‌ನ ವ್ಯವಸ್ಥೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಕೆಲವು ಸಮಯ ನಗರದ ಬಸ್‌ನಿಲ್ದಾಣದಲ್ಲಿ ಬಸ್‌ಗಳು ನಿಂತಿದ್ದರಿಂದ ಬೇರೆ ಬೇರೆ ಕಡೆಗೆ ತೆರಳಬೇಕಾದ ಪ್ರಯಾಣಿಕರು ಪೇಚಾಟಕ್ಕೆ ಸಿಲುಕಿದ್ದರು. ಸಾರಿಗೆ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಮನ ಒಲಿಸಲು ಪ್ರಯತ್ನಿಸಿದರು ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರೆಸಿದರು.
ವಿಷಯ ತಿಳಿದ ಕಾಲೇಜಿನ ಪ್ರಾಂಶುಪಾಲ ತಂಬ್ರಳ್ಳಿ ಡಾ.ವೀರಭದ್ರಪ್ಪ ಬಸ್‌ನಿಲ್ದಾಣಕ್ಕೆ ಬಂದು ವಿದ್ಯಾರ್ಥಿಗಳ ಮನ ಒಲಿಸಿ ಪ್ರತಿಭಟನೆಯನ್ನು ಕೈಬಿಡುವಂತೆ ಮಾಡಿದರು. ಪ್ರಾಂಶುಪಾಲರು ಮಾತನಾಡಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್‌ನ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‌ಗಳನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಲಾಗುವುದೆಂದು ಸಾರಿಗೆ ಇಲಾಖೆ ಅಧಿಕಾರಿ ಕೃಷ್ಣ ತಿಳಿಸಿದರು.