ಕಾಲೇಜ್ ಮೈದಾನದ ಉಳಿವಿಗಾಗಿ,
11ದಿನಕ್ಕೆ ಕಾಲಿಟ್ಟ ನಿರಶನ, ಶಾಸಕರು ಮೌನ, ಅಧಿಕಾರಿಗಳ ನಿರ್ಲಕ್ಷ್ಯ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.15 :-ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮಹದೇವ ಮೈಲಾರ ಕ್ರೀಡಾಂಗಣ ಉಳಿಸುವಂತೆ ಒತ್ತಾಯಿಸಿ ಗಾಂಧೀಜಿ ಚಿತಾಭಸ್ಮವಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಬಳಿ ಇಂದಿಗೆ 11 ದಿನಕ್ಕೆ ಕಾಲಿಟ್ಟಿರುವ  ಅನಿರ್ದಿಷ್ಟಾವಧಿ ಸತ್ಯಾಗ್ರಹ  ಶಾಸಕರ ಮೌನ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೋರಾಟದ  ಕಾವು ದಿನದಿಂದ ದಿನಕ್ಕೆ ತೀವ್ರಸ್ವರೂಪಕ್ಕೆ ತಿರುಗುವ ಲಕ್ಷಣ ಕಾಣುತ್ತಿದ್ದು ಸಂಗೀತಾದ ಮೂಲಕ ಸಾಂಸ್ಕೃತಿಕ ಸತ್ಯಾಗ್ರಹ  ಸಹ ನಡೆಸಲಾಯಿತು. 
ಕಳೆದ 75 ವರ್ಷಗಳಿಂದಲೂ ಆಟದ ಮೈದಾನವು ಪಟ್ಟಣದ ಸರಕಾರಿ ಶಾಲಾ, ಪದವಿಪೂರ್ವ ಕಾಲೇಜಿನ ಸ್ವಾಧೀನದಲ್ಲಿರುವ ಬಗ್ಗೆ ನಾನಾ ದಾಖಲಿಗಳಿವೆ. ಅಲ್ಲದೆ, ಇತ್ತಿಚೆಗೆ ಸರಕಾರಿ ಶಾಲಾ, ಕಾಲೇಜಿನ ಸ್ವಾಧೀನದಲ್ಲಿರುವ ಸ್ವತ್ತು, ಕಟ್ಟಡ, ಜಮೀನುಗಳನ್ನು ಆಯಾ ಶಾಲಾ, ಕಾಲೇಜಿನ ಹೆಸರಿಗೆ ಖಾತೆ ಮಾಡಿಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದ ಆಧಾರದಲ್ಲಿ ಪಟ್ಟಣದ ಆಟದ ಮೈದಾನವನ್ನು ಖಾತೆ ಮಾಡಿಸುವಂತೆ ನಿರಶನ ಕೈಗೊಳ್ಳಲಾಗಿದೆ. ಮಾ.3ರಿಂದ  ಆರಂಭವಾಗಿದ್ದ ಮೈದಾನ ಉಳಿಸಿ ಹೋರಾಟ ಇಂದಿಗೆ  ಪಟ್ಟಣದ ನಾಗರಿಕರು, ನಾನಾ ಪಕ್ಷಗಳು, ವಕೀಲರು, ಅಂಗನವಾಡಿ ಕಾರ್ಯಕರ್ತೆಯರ ಸಂಘ ಸೇರಿ ಪ್ರಜ್ಞಾವಂತರು, ಯುವಕರು, ಮಹಿಳೆಯರು, ಶಾಲೆಯ ಹಳೆಯ ವಿದ್ಯಾರ್ಥಿಗಲು ಬೆಂಬಲ ನೀಡುತ್ತಿದ್ದಾರೆ. ಅಲ್ಲದೆ, ಹೋರಾಟದ ಸ್ವರೂಪಕ್ಕೆ ಸಂಗೀತಗಾರ ತಿಂದಪ್ಪ ಮತ್ತು ಸಂಗಡಿಗರಿಂದ ಸೋಮವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದ ಮೂಲಕ ಸಾಂಸ್ಕೃತಿಕ ಪ್ರತಿಭಟನೆ ಸಂಕೇತವೂ ನಡೆಯಿತು.
ಶಾಸಕರ ಮೌನ : ಮೈದಾನ ಉಳಿವಿಗಾಗಿ ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಧಾವಿಸಿದ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರ ಮೌನ ಎದ್ದು ಕಾಣುತ್ತಿತ್ತು ಅಲ್ಲದೆ ಅನೇಕ ಆಧಾರಗಳಿದ್ದರು ಸರ್ಕಾರದ ಮೈದಾನದ ಜಾಗವನ್ನು ಖಾತೆ ಮಾಡಿಕೊಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದ್ದು ಇದೇ ರೀತಿ ಅಧಿಕಾರಿಗಳ ನಿರ್ಲಕ್ಷ್ಯ ತೋರಿದಲ್ಲಿ ಬೀದಿಗಿಳಿದು ಹೋರಾಟ ಮಾಡಿ ಕೂಡ್ಲಿಗಿ ಬಂದ್ ಮಾಡುವಲ್ಲಿ ಮೈದಾನ ಉಳಿಸಿ ಹೋರಾಟ ಸಮಿತಿಯ ಎ.ಎಂ.ರಾಘವೇಂದ್ರ , ವಾಲಿಬಾಲ್ ವೆಂಕಟೇಸ್, ಸಂದೀಪ್ ರಾಯಸಂ ಸೇರಿ ಅನೇಕರು ಮುಂದಾಗುವುದಾಗಿ ತಿಳಿಸಿದ್ದಾರೆ.