ಕಾಲೇಜು ಪ್ರಾರಂಭ: ವಿದ್ಯಾರ್ಥಿಗಳ ಸಂಖ್ಯೆ ವಿರಳ

ಹುಬ್ಬಳ್ಳಿ, ನ 17: ಕೊರೊನಾ-19 ವೈರಾಣು ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‍ಡೌನ್ ವಿಧಿಸಿದ್ದ ಸಂದರ್ಭದಿಂದ ಮುಚ್ಚಲ್ಪಟ್ಟಿದ್ದ ಕಾಲೇಜುಗಳ ಪ್ರಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ್ದು, ಇಂದಿನಿಂದ ಕಾಲೇಜುಗಳು ಪ್ರಾರಂಭಗೊಂಡಿವೆ.
ರಾಜ್ಯಾದ್ಯಂತ ಕಾಲೇಜುಗಳು ಪ್ರಾರಂಭವಾದರೂ ಹುಬ್ಬಳ್ಳಿ-ಧಾರವಾಡದಲ್ಲಿ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ವಿರಳವಾಗಿತ್ತು. ಕೊರೊನಾ ವೈರಾಣು ಹರಡುವಿಕೆಯ ಮಧ್ಯೆ ಕಾಲೇಜುಗಳನ್ನು ಪ್ರಾರಂಭ ಮಾಡಬೇಕೊ ಅಥವಾ ಬೇಡವೊ ಎಂಬುದನ್ನು ಹಲವಾರು ಬಾರಿ ಚರ್ಚಿಸಿ ಸರ್ಕಾರ ಕೊನೆಗೂ ಹಸಿರು ನಿಶಾನೆ ತೋರಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಕಾಲೇಜುಗಳಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಕಾಲೇಜುಗಳನ್ನು ತೆರೆಯಲು ಕ್ರಮ ಕೈಗೊಂಡಿದೆ. ಇಂದು ಕಾಲೇಜುಗಳು ಪ್ರಾರಂಭವಾಗಿದ್ದು, ಅವಳಿ ನಗರದಲ್ಲಿ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ಸುಳಿಯದಿರುವುದು ಕಂಡು ಬಂತು. ಕೇವಲ ಬೆರಳೆಣಿಕೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೆಲ ಕಾಲೇಜುಗಳಿಗೆ ಆಗವಿಸುತ್ತಿರುವ ದೃಶ್ಯಗಳು ಕಂಡುಬಂದವು.
ಕೇವಲ ಬೆರಳೆಣಿಕೆಯ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಪ್ರವೇಶಕ್ಕೆ ಅವಕಾಶ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.
ಕೊರೊನಾ ವೈರಾಣು ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕದ ಛಾಯೆ ಆವರಿಸಿದ್ದು, ವಿದ್ಯಾರ್ಥಿಳು ಭಯದಲ್ಲಿಯೇ ಕಾಲೇಜಿಗೆ ಹೆಜ್ಜೆ ಇಡುವಂತಹ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಎದುರಾಗಿದೆ.
ಲಾಕ್‍ಡೌನ್ ಬಳಿಕ ಮೊದಲ ಬಾರಿಗೆ ತರಗತಿಗಳು ಆರಂಭವಾಗುತ್ತಿದ್ದು, ನಿನ್ನೆಯಿಂದಲ್ಲೇ ಕಾಲೇಜುಗಳಲ್ಲಿ ಸೋಂಕು ನಿವಾರಕ ಔಷಧಿಗಳನ್ನು ಸಿಂಪಡಿಸಿ ಸಿದ್ಧಪಡಿಸಿಕೊಳ್ಳಲಾಗಿದೆ.
ಅವಳಿ ನಗರದ ಪ್ರಮುಖ ಕಾಲೇಜುಗಳಾದ ಕಾಡಸಿದ್ದೇಶ್ವರ ಮಹಾವಿದ್ಯಾಲಯ, ವುಮನ್ಸ್ ಕಾಲೇಜು, ಬಿವಿಬಿ ಕಾಲೇಜು, ಜಾಬಿನ್ ಕಾಲೇಜುಗಳು ಸೇರಿದಂತೆ ಇನ್ನಿತರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ಬಿಕೋ ಎನ್ನುತ್ತಿದ್ದವು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಾಲೇಜನತ್ತ ಹೆಜ್ಜೆ ಇಡುತ್ತಾರೋ ಎಂಬುದು ಕಾದು ನೋಡಬೇಕಿದೆ.