ಕಾಲೇಜು ಪ್ರಾರಂಭ ವಿದ್ಯಾರ್ಥಿಗಳ ಸಂಖ್ಯೆ ವಿರಳ

ನರೇಗಲ್ಲ,ನ18 : ಕೋವಿಡ್-19 ಲಾಕ್ ಡೌನ್ ಬಳಿಕ ಪದವಿ ಕಾಲೇಜುಗಳು ಮಂಗಳವಾರ ಆರಂಭಗೊಂಡಿದ್ದು, ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣದ ಶ್ರೀ ಅನ್ನದಾನೇಶ್ವರ ಕಲಾ, ವಾಣಿಜ್ಯ, ವಿಜ್ಞಾನ ಪದವಿ ಕಾಲೇಜಿನಲ್ಲಿ 15 ವಿದ್ಯಾರ್ಥಿಗಳು ಇದ್ದರೆ, ಇನ್ನೂ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೊದಲು ದಿನ ವಿದ್ಯಾರ್ಥಿಗಳು ಇಲ್ಲದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಸರ್ಕಾರ ಕೆಲವೊಂದು ನಿಯಮಗಳನ್ನು ರೂಪಿಸಿರುವುದು ವಿದ್ಯಾರ್ಥಿಗಳು ಕಾಲೇಜಿಗೆ ಬರಲು ವಿಳಂಬವಾಗುವಂತೆ ಮಾಡಿದೆ. ಕೋವಿಡ್-19 ಪರೀಕ್ಷಾ ವರದಿ ಸಲ್ಲಿಸುವುದು ಕಡ್ಡಾಯ ಹಾಗೂ ಪಾಲಕರಿಂದ ಮುಚ್ಚಳಿಕೆ ಪತ್ರ ತರಬೇಕಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ಕಾಲೇಜಿನ ಕಡೆ ಮುಖ ಮಾಡಿಲ್ಲ. ಪಟ್ಟಣದ ಎರಡು ಪದವಿ ಕಾಲೇಜುಗಳಲ್ಲಿ ಸಂಪೂರ್ಣ ಸ್ಯಾನಿಟೈಸೇಶನ್ ಮಾಡಲಾಗಿದೆ. ಬರುವ ವಿದ್ಯಾರ್ಥಿಗಳನ್ನು ಧರ್ಮಲ್ ಸ್ಕ್ರೀನಿಂಗ್ ಮೂಲಕ ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಬಸ್, ಬಸ್ ಪಾಸ್ ಇಲ್ಲ : ಪಟ್ಟಣದ ಅನ್ನದಾನೇಶ್ವರ ಪದವಿ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರು ಆಗಿರುವುದರಿಂದ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಹಾಗೂ ಬಸ್ ಪಾಸ್ ವಂಚಿತರಾಗಿರುವುದರಿಂದ ಕಾಲೇಜಿಗೆ ಬರಲು ಹಿಂದೆಟ್ಟು ಹಾಕುತ್ತಿದ್ದಾರೆ.