ಕಾಲೇಜು ದಿನಗಳಲ್ಲಿ ಬುತ್ತಿ ಡಬ್ಬಿಗಾಗಿ ಕಾಯುತ್ತಿದ್ದವ ಬ್ಯಾಂಕ್ ನೌಕರರ ಸಂಘಟನೆಯ ಉನ್ನತ ಸ್ಥಾನಕ್ಕೆ ಏರಿ ನಿವೃತ್ತಿಗೊಂಡ ರವೀಂದ್ರ ಕುಲಕರ್ಣಿ

ವಿಜಯಪುರ, ಜೂ.9-ಒಂದೊಮ್ಮೆ ಬುತ್ತಿ ಡಬ್ಬಿಯ ಮೇಲೆಯೆ ತಮ್ಮ ದಿನನಿತ್ಯ ಹಸಿವನ್ನು ಅವಲಂಬಿಸುತ್ತಿದ್ದ ಕಾಲೇಜು ವಿದ್ಯಾರ್ಥಿಯೋರ್ವ ಕಲಿಯಲೇಬೇಕೆಂಬ ಛಲದಿಂದ ಶಿಕ್ಷಣ ಪಡೆದು ಬ್ಯಾಂಕ್ ನೌಕರಿ ಸೇವೆಗೆ ಸೇರಿ, ಬ್ಯಾಂಕ್ ನೌಕರರ ಸಂಘಟನೆಯಲ್ಲಿ ಗುರುತಿಸಿ ಕೊಂಡು ಉನ್ನತ ಸ್ಥಾನಕ್ಕೆ ಏರಿದ ಅಪರೂಪದ ಉದಾಹರಣೆ ಐತಿಹಾಸಿಕ ವಿಜಯಪುರ ನಗರದಲ್ಲಿ ಕಾಣಸಿಗುತ್ತದೆ.
38 ವರ್ಷಗಳ ಬ್ಯಾಂಕ್ ಸೇವೆಯನ್ನು ಪೂರ್ತಿಗೊಳಿಸಿದ ಸಂತೃಪ್ತಿಯೊಂದಿಗೆ ಮೇ 31ರಂದು ನಿವೃತ್ತಿ ಹೊಂದಿದ ಕೆನರಾ ಬ್ಯಾಂಕ್ ಉದ್ಯೋಗಿ ಆರ್.ಎಸ್ ಕುಲಕರ್ಣಿ ಅವರೇ ತಮ್ಮ ಸಂಪೂರ್ಣ ಜೀವನವನ್ನು ಬ್ಯಾಂಕ್ ನೌಕರರ ಹಿತಾಸಕ್ತಿ ಕಾಪಾಡಲು ಹೆಣಗಾಡಿದ ಅಪರೂಪದ ವ್ಯಕ್ತಿ.
ಮೂಲತ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಹಿರಸಂಗ ಗ್ರಾಮದವರಾದ ರವೀಂದ್ರ ಕುಲಕರ್ಣಿ, ತಮ್ಮ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಬಳಿಕ ಪಿ ಯು ವಿದ್ಯಾಭ್ಯಾಸವ£ ಪಿ.ಡಿ.ಜೆ ಹೈಸ್ಕೂಲಿನ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಸೇರಿದರು. ಬಿ ಕಾಂ ಪದವಿಯ ಅಭ್ಯಾಸವನ್ನು ಎ.ಎಸ್.ಪಿ ಕಾಮರ್ಸ ಕಾಲೇಜಿನಲ್ಲಿ ಮುಗಿಸಿದರು. ಇವರು ಪಿಯುಸಿ ಹಾಗೂ ಪದವಿ ಕಾಲೇಜು ಅಭ್ಯಾಸವನ್ನು ಮಾಡುವಾಗ ಅನುಭವಸಿದ ಕಷ್ಟ ಅಷ್ಟಿಷ್ಟಲ್ಲ, ಕೇವಲ ಎರಡು ಜೊತೆ ಪೈಜಾಮಾ-ಅಂಗಿಯೊಂದಿಗೆ ತಮ್ಮ ಸಂಪೂರ್ಣ ಕಾಲೇಜು ಶಿಕ್ಷಣವನ್ನು ಮುಗಿಸಿದರು.
ಆ ಸಮಯದಲ್ಲಿ ಊರಿನಿಂದ ಬರುತ್ತಿದ್ದ ಬುತ್ತಿ ಡಬ್ಬಿಯನ್ನೇ ತಮ್ಮ ಹಸಿವು ನೀಗಿಸಿಕೊಳ್ಳಲು ಅವಲಂಬಿಸಿದ್ದರು. ಒಂದು ದಿನವೇನಾದರೂ ಬುತ್ತಿ ಡಬ್ಬಿ ಬರದಿದ್ದರೆ ಉಪವಾಸವೇ ಗತಿ.
ಇವರ ವಿದ್ಯಾರ್ಥಿ ಜೀವನದ ಇನ್ನೊಂದು ವೈಶಿಷ್ಠತೆ ಎಂದರೆ, ಹೊಸ ಪಠ್ಯ ಪುಸ್ತಕ ಖರೀದಿಸುವ ಆರ್ಥಿಕ ಪರಿಸ್ಥಿತಿ ಇರದಿದ್ದಕ್ಕೆ ಕಾಲೇಜಿನ ಗ್ರಂಥಾಲಯದಿಂದ ನೀಡುತ್ತಿದ್ದ ಪುಸ್ತಕಗಳೆ ಇವರಿಗೆ ಆಸರೆ. ಅಲ್ಲದೇ ಸ್ಥಿತಿವಂತ ಸ್ನೇಹಿತರು ಕೊಂಡು ತಂದ ಪುಸ್ತಕಗಳನ್ನು ಎರವಲು ಪಡೆದು ಓದಿನ ಹಸಿವನ್ನು ಹಿಂಗಿಸಿಕೊಳ್ಳುತ್ತಿದ್ದುದು.
ಪದವಿ ಕಲಿಯುವ ಸಂದರ್ಭದಲ್ಲಿ ಬ್ಯಾಂಕ್ ನೌಕರಿಗಾಗಿ ಆಯ್ಕೆ ಪರೀಕ್ಷೆಗಳನ್ನು ಎದುರಿಸುತ್ತಿದ್ದ ಆರ್.ಎಸ್, ಪಾಸಾದ ಮರುವರ್ಷವೇ ಉತ್ತೀರ್ಣರಾಗಿ ಮೌಖಿಕ ಪರೀಕ್ಷೆಗೆ ಹಾಜರಾಗಿ, 1983 ಮೇ 6ರಂದು ಕೆನರಾ ಬ್ಯಾಂಕ್‍ಗೆ ಸೇರ್ಪಡೆಗೊಂಡು ಪ್ರಪ್ರಥಮ ಬಾರಿ ಮಹಾರಾಷ್ಟ್ರದ ವಾಲಚಂದ ನಗರ ಪಟ್ಟಣದ ಶಾಖೆಗೆ ನೌಕರಿಗೆ ಹಾಜರಾದರು. ನಂತರ 1985 ಮೇ 2 ರಂದು, ಆರ್.ಎಸ್ ವಿಜಯಪುರ ಮುಖ್ಯ ಶಾಖೆಗೆ ವರ್ಗಾವಣೆಗೊಂಡರು.
ತಮ್ಮ ಸುದೀರ್ಘ ಸೇವಾವಧಿಯಲ್ಲಿ ಬ್ಯಾಂಕಿನ ನೌಕರರ ಯುನಿಯನ್ ಸದಸ್ಯರಾಗಿ ನೌಕರರ ಹಿತರಕ್ಷಣೆಗೆ ಮುಂದಾಗಿ ತಮ್ಮ ಸಕ್ರೀಯತೆಯನ್ನು ತೋರಿಸಿ ಕೊಂಡರು. 1986ರಲ್ಲಿ ಇವರು ವಿಜಯಪುರ ಮುಖ್ಯ ಶಾಖೆಯ ಶಾಖಾ ಕಾರ್ಯದರ್ಶಿಯಾಗಿ ಕಾರ್ಯನಿರ್ವ ಹಿಸಿದರು.
ತಮ್ಮ ಯುನಿಯನ್ ಸೇವೆಯನ್ನು ವಿಸ್ತಾರಗೊಳಿಸಿದ ರವೀಂದ್ರ, ವಿಜಯಪುರ ಜಿಲ್ಲಾ ಬ್ಯಾಂಕ್ ನೌಕರರ ಅಸೋಸಿಯೇಶನ್ ಕಾರ್ಯದರ್ಶಿಯಾಗಿ 1990 ರಿಂದ 1995 ರಲ್ಲಿ ಹಲವಾರು ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
ಯುನಿಯನ್ ದಲ್ಲಿ ಜಿಲ್ಲಾ ಮಟ್ಟ, ವಿಭಾಗೀಯ ಮಟ್ಟ, ರಾಜ್ಯ ಮಟ್ಟ ಕೊನೆಗೆ ರಾಷ್ಟ್ರ ಮಟ್ಟದ ಸ್ಥಾನ ಮಾನ ಗಳಿಸಿದ ಇವರು ತಮ್ಮ ಸಂಘಟನೆಯ ಸಾಮರ್ಥ ತೋರಿಸಿದರು.
ಬ್ಯಾಂಕ್ ನೌಕರಿಯಲ್ಲಿ ಯಾವುದೇ ಪದೊನ್ನತಿಗಳಿಗೆ ದುಂಬಾಲು ಬೀಳದೇ, ನೌಕರರ ಹಿತರಕ್ಷಣೆಯಲ್ಲಿ ಯುನಿಯನ್ ಹೊರಿಸಿದ ಜವಾಬ್ದಾರಿಯನ್ನು ಹೊರಲು ಮುಂದಾದರು. ಬ್ಯಾಂಕಿನ ಪ್ರಗತಿಗೆ ತಮ್ಮ ಕೊಡುಗೆ ನೀಡಿದ ಇವರು, ಅದೇ ವೇಳೆ ಹೊಸದಾಗಿ ನೌಕರಿ ಸೇರಿದ ಯುವ ಪಡೆಗೆ ಸೂಕ್ತ ಮಾರ್ಗದರ್ಶನ ನೀಡಿದರು.
ವಿಜಯಪುರದ ಯಾವುದೇ ಬ್ಯಾಂಕ್ ನೌಕರರ ಸಂಘಟನೆ ಕಾರ್ಯ ಚಟುವಟಿಕೆಗಳಲ್ಲಿ ಆರ್.ಎಸ್ ಓರ್ವ ಅನಿಭಿಷಕ್ತ ರಾಜನಂತೆ ಕಂಗೊಳಿಸಿದರು. ಹೀಗಾಗಿ ಆರ್.ಎಸ್ ವಿಜಯಪುರ ಅಷ್ಟೇ ಅಲ್ಲ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರೊಂದಿಗೆ ಗುರುತಿಸಿಕೊಂಡು ಈ ರೀತಿ ಉನ್ನತ ಮಟ್ಟದ ಸ್ಥಾನಕ್ಕೆ ಏರಿದ ಖ್ಯಾತಿ ಹೊಂದಿದ್ದರು.
ಬ್ಯಾಂಕ್ ಪಿಗ್ಮಿ ಸಂಗ್ರಾಹಕರರ ಹಿತರಕ್ಷಣೆಗೆ ಮುಂದಾದ ಆರ್‍ಎಸ್ ಅವರ ಸಂಘದ ಮುಖಂಡರಾಗಿ ಆ ವರ್ಗದ ನೋವು ನಲಿವುಗಳಿಗೆ ಸ್ಪಂದಿಸುವ ಮೂಲಕ ತನ್ನ ನೈಜ ನಾಯಕತ್ವದ ಗುಣವನ್ನು ಸಾಬೀತು ಪಡಿಸಿದರು.
ತಮ್ಮ ಬ್ಯಾಂಕ್ ನೌಕರಿಯ ನಡುವೆ ತಮ್ಮ ಹುಟ್ಟೂರಾದ ಅಹಿರಸಂಗದಲ್ಲಿ ಜಮೀನು ಸ್ವಾಧೀನ ಪಡಿಸಿಕೊಂಡು ಅದರ ಅಭಿವೃದ್ಧಿಯತ್ತ ಗಮನ ಹರಿಸಿದರು. ಮೂವರು ಸಹೋದರರ ಜೊತೆಗೂಡಿ ಹತ್ತು ಹಲವಾರು ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಕನಲ್ಲಿರುವ ಗುಣಗಳನ್ನು ಮೈಗೂಡಿಸಿಕೊಂಡಿರುವರು.
ನಿವೃತ್ತಿಯ ಬಳಿಕ ಆರ್ ಎಸ್ ಕೃಷಿಯಲ್ಲಿ ತಮ್ಮನ್ನು ತಾವೇ ಇನ್ನೂ ಹೆಚ್ಚಾಗಿ ತೊಡಗಿಸಿಕೊಂಡು ಭೂತಾಯಿ ಸೇವೆಯನ್ನು ಮಾಡುವ ಇರಾದೆಯನ್ನು ಇಟ್ಟುಕೊಂಡಿರುವದು ಅವರಲ್ಲಿರುವ ನೈಜ ಕೃಷಿಕನ ಗುಣವನ್ನು ಎತ್ತಿತೋರಿಸುತ್ತದೆ.