ಕಾಲೇಜು ಆರಂಭಕ್ಕೆ ಯುಜಿಸಿಯಿಂದ ಮಾರ್ಗಸೂಚಿ ಪ್ರಕಟ

ನವದೆಹಲಿ,ನ.೬- ಈ ತಿಂಗಳು ೧೭ ರಿಂದ ಯುಜಿ, ಸ್ನಾತಕೋತ್ತರ ಕಾಲೇಜುಗಳು ಆರಂಭವಾಗುತ್ತಿದ್ದು, ಯುಜಿಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕಂಟೈನ್ಮೆಂಟ್‌ಝೋನ್ ಹೊರಗಡೆ ಇರುವ ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ತೆರೆಯಬಹುದಾಗಿದೆ. ಕಂಟೈನ್ಮೆಂಟ್ ವಲಯದಲ್ಲಿರುವ ವಿದ್ಯಾರ್ಥಿಗಳು ಕಾಲೇಜಿಗೆ ಬರುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮಾರಕ ಕೊರೊನಾ ಸಂಕಷ್ಟದ ನಡುವೆಯೇ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ನ. ೧೭ ರಿಂದ ಪ್ರಾರಂಭವಾಗಲಿದ್ದು ಮಾಸ್ಕ್, ಸ್ಯಾನಿಟೈಸರ್, ದೈಹಿಕ ಅಂತರ ಕಡ್ಡಾಯವಾಗಿರಬೇಕೆಂದು ತಿಳಿಸಿರುವ ಯುಜಿಸಿ ೬ ಅಡಿಂiiಷ್ಟು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ಕಡ್ಡಾಯವಾಗಿ ಪೂರೈಸಬೇಕು. ಕಾಲೇಜು ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಖಾಸಗಿ ವಾಹನಗಳು, ಕಾಲೇಜು ಬಸ್‌ಗಳನ್ನು ಸತತವಾಗಿ ಸ್ಯಾನಿಟೈಜ್ ಮಾಡಬೇಕು ಎಂದು ಸೂಚಿಸಿದೆ.
೪೦ ರಿಂದ ೬೦ ಸೆಕೆಂಡುಗಳ ಕಾಲ ಸೋಪಿನಿಂದ ಕೈಗಳನ್ನು ಆಗಿಂದಾಗ್ಗೆ ತೊಳೆದುಕೊಳ್ಳಬೇಕು. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನ ಹರಿಸಲು ಆರೋಗ್ಯ ಸಮಿತಿ ರಚನೆ ಮಾಡಬೇಕು. ಕಾಲೇಜು ಆವರಣದಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವಿದ್ಯಾರ್ಥಿ ಆರೋಗ್ಯಸೇತು ಆಪ್‌ನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ.

ಮಾರ್ಗಸೂಚಿ ವಿವರ

 • ಯುಜಿಸಿ ಮತ್ತು ಶಿಕ್ಷಣ ಸಚಿವಾಲಯದ ಮಾರ್ಗಸೂಚಿ ಪಾಲನೆ ಕಡ್ಡಾಯ.
 • ಕಾಲೇಜು ಆರಂಭಕ್ಕಿಂತ ಮೊದಲು ಆರೋಗ್ಯ ಮತ್ತು ಉನ್ನತ ಶಿಕ್ಷಣ ಇಲಾಖೆಯಿಂದ ಕೋವಿಡ್-೧೯ ರಿಂದ ಪ್ರದೇಶ ಸುರಕ್ಷಿತವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
 • ಯುಜಿಸಿ ಮಾರ್ಗಸೂಚಿ ಹಾಗೂ ರಾಜ್ಯಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು.
 • ಕಂಟೈನ್ಮೆಂಟ್ ವಲಯದ ಹೊರಗಿರುವ ಕಾಲೇಜು ಹಾಗೂ ವಿವಿಗಳನ್ನು ತೆರೆಯಬಹುದಾಗಿದೆ.
 • ಕಂಟೈನ್ಮೆಂಟ್ ವಲಯದಲ್ಲಿರುವ ವಿದ್ಯಾರ್ಥಿಗಳು, ಸಿಬ್ಬಂದಿ ಕಾಲೇಜಿಗೆ ಬರುವಂತಿಲ್ಲ.
 • ಸಿಬ್ಬಂದಿ, ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಆರೋಗ್ಯಸೇತು ಆಪ್ ಕಡ್ಡಾಯ.
 • ಕಾಲೇಜುಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಕಡ್ಡಾಯ.
 • ವಿದ್ಯಾರ್ಥಿಗಳ ಆರೋಗ್ಯದ ಕಡೆ ಗಮನ ಹರಿಸಬೇಕು.
 • ತರಗತಿಗಳನ್ನು ಆರಂಭಿಸಲು ರಾಜ್ಯಸರ್ಕಾರದ ನಿರ್ಧಾರ ಅಗತ್ಯ.
 • ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಗುಂಪು ಸೇರದಂತೆ ನೋಡಿಕೊಳ್ಳಬೇಕು.
 • ಕೆಲ ವಿದ್ಯಾರ್ಥಿಗಳು ಬಾರದಿದ್ದ ವಿದ್ಯಾರ್ಥಿಗಳಿಗೆ ಆನ್‌ಲೈನ್ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಬೇಕು.
 • ಹವಾನಿಯಂತ್ರಿತ ಅತಿ ಹೆಚ್ಚಾಗಿ ಬಳಸದೆ ೨೪ ರಿಂದ ೩೦ ಡಿಗ್ರಿ ಸೆಲ್ಸಿಯಸ್‌ನಲ್ಲಿರಬೇಕು.
 • ಕಾಲೇಜು, ತರಗತಿಯಲ್ಲಿ ಬೆಳಕು, ಗಾಳಿ ಚೆನ್ನಾಗಿರಬೇಕು.
 • ಕಾಲೇಜುಗಳಲ್ಲಿ ಈಜುಕೊಳವಿದ್ದರೆ ಮುಚ್ಚಬೇಕು. ವಯಸ್ಸಾದವರು, ಕಾಲೇಜಿನ ಸಿಬ್ಬಂದಿಗಳು, ಗರ್ಭಿಣಿಯರು ಜಾಗೃತರಾಗಿರಬೇಕು.
 • ಅಗತ್ಯ ಬಿದ್ದರೆ ಮಾತ್ರ ಹಾಸ್ಟೆಲ್ ತೆರೆಯಬೇಕು. ರೋಗಲಕ್ಷಣವಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಉಳಿಯಲು ಅವಕಾಶ ನೀಡಬಾರದು.
 • ಹೊರ ರಾಜ್ಯ, ಹೊರ ಜಿಲ್ಲೆಯಿಂದ ಬರುವ ವಿದಾರ್ಥಿಗಳಿಗೆ ೧೪ ದಿನ ಕ್ವಾರಂಟೈನ್ ಮುಗಿಸಿ ತರಗತಿಗೆ ಪ್ರವೇಶ ನೀಡಲಾಗುತ್ತದೆ.
 • ಕೋವಿಡ್ ನೆಗೆಟೀವ್ ವರದಿ ಇದ್ದರೂ ೧೪ ದಿನ ಕ್ವಾರಂಟೈನ್ ಕಡ್ಡಾಯ.
 • ಹಾಸ್ಟೆಲ್‌ನಲ್ಲಿ ಗುಂಪು ಸೇರುವಂತಿಲ್ಲ. ಊಟದ ಕೊಠಡಿ, ಆಟದ ಮೈದಾನ, ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.