ಕಾಲೇಜು ಆರಂಭಕ್ಕೆ ಪ್ರಾರ್ಥಿಸಿ ೨೦೨೦ ದೀಪ ಬೆಳಗಿಸಿದ ಉಪನ್ಯಾಸಕರು

ಕುಣಿಗಲ್, ನ. ೧೯- ಕೋವಿಡ್-೧೯ರ ಹಿನ್ನೆಲೆಯಲ್ಲಿ ಕಳೆದ ೯ ತಿಂಗಳಿನಿಂದ ಶಾಲಾ-ಕಾಲೇಜುಗಳು ತೆರೆದಿಲ್ಲ. ವಿದ್ಯಾರ್ಥಿಗಳ ವ್ಯಾಸಂಗ ಕುಂಠಿತಗೊಂಡಿದೆ. ಹೀಗಾಗಿ ಕೊರೊನಾ ಮಹಾಮಾರಿ ಆದಷ್ಟು ಬೇಗ ತೊಲಗಿ ಶಾಲಾ-ಕಾಲೇಜುಗಳು ಬೇಗನೆ ಆರಂಭವಾಗಿ ವಿದ್ಯಾರ್ಥಿಗಳ ಬಾಳಿನಲ್ಲಿ ಜ್ಞಾನದ ಬೆಳಕು ಪಸರಿಸಲಿ ಎಂದು ೨೦೨೦ ದೀಪಗಳನ್ನು ಹಚ್ಚುವ ಮೂಲಕ ಉಪನ್ಯಾಸಕರು ದೇವರನ್ನು ಪ್ರಾರ್ಥಿಸಿದ ಅಪರೂಪದ ಘಟನೆ ಪಟ್ಟಣದಲ್ಲಿ ನಡೆಯಿತು.
ಯಾವುದೇ ಹಬ್ಬ ಹರಿದಿನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೂ ಅತ್ಯಂತ ಶ್ರದ್ಧೆ ಮತ್ತು ಅಷ್ಟೇ ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿರುವ ಪಟ್ಟಣದ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಕಪನಿಪಾಳ್ಯ ರಮೇಶ್ ಮತ್ತು ಉಪನ್ಯಾಸಕರು ದೀಪಾವಳಿ ಹಬ್ಬದ ದಿನದಂದು ಇಂತಹ ಕೋರಿಕೆಯನ್ನು ದೇವರಲ್ಲಿ ಸಲ್ಲಿಸಿದ್ದಾರೆ.
ಪ್ರತಿ ವರ್ಷವೂ ವಿದ್ಯಾರ್ಥಿಗಳು, ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ಜತೆಗೂಡಿ ?ಕಾಲೇಜಿನ ಹಬ್ಬ? ಎಂಬಂತೆ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಮಹಾಮಾರಿ ಇವರೆಲ್ಲರ ಹರ್ಷವನ್ನು ಕಸಿದುಕೊಂಡಿದೆ. ಇದರಿಂದ ವಿಚಲಿತರಾಗದ ಪ್ರಾಚಾರ್ಯರು ತಮ್ಮ ಎಲ್ಲ ಉಪನ್ಯಾಸಕರು ಮತ್ತು ಸಿಬ್ಬಂದಿಯನ್ನು ಒಟ್ಟುಗೂಡಿಸಿಕೊಂಡು ಕೊಠಡಿಗಳನ್ನು ಮತ್ತು ಮೇಜು ಕುರ್ಚಿಗಳನ್ನು ಗಂಜಲದಿಂದ ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಿದರು. ಇದಾದ ಬಳಿಕ ಗಣೇಶ, ಸರಸ್ವತಿ, ಲಕ್ಷ್ಮಿದೇವರುಗಳನ್ನು ಪೂಜಿಸಿ ಕಳೆದ ೯ ತಿಂಗಳಿನಿಂದ ಶಾಲಾ-ಕಾಲೇಜುಗಳಿಗೆ ಕವಿದಿರುವ ಕೊರೊನಾ ಎಂಬ ಕರಿ ನೆರಳಿನಿಂದ ಮುಕ್ತಿ ಸಿಗಲಿ ಎಂದು ಮುಕ್ಕೋಟಿ ದೇವರುಗಳನ್ನು ಪ್ರಾರ್ಥಿಸಿ ೨೦೨೦ ಮಣ್ಣಿನ ಹಣತೆಗಳಿಗೆ ಎಣ್ಣೆ ಮತ್ತು ಬತ್ತಿಯನ್ನು ಹಾಕಿ ಕಾಲೇಜಿನ ಕಟ್ಟಡದ ಮೇಲಿಟ್ಟು ಕಾಲೇಜನ್ನು ಮೈಸೂರಿನ ಅರಮನೆಯಂತೆ ಕಂಗೊಳಿಸುವ ರೀತಿಯಲ್ಲಿ ದೀಪ ಹಚ್ಚಿ ಬೆಳಗಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಕಪನಿಪಾಳ್ಯ ರಮೇಶ್, ಇಡೀ ಜಗತ್ತಿಗೆ ಬೆಳಕು ನೀಡುವ ಹಣತೆ ಮತ್ತು ತನಗೆ ಅರಿವೇ ಇಲ್ಲದಂತೆ ಸುಡುವ ಬೆಂಕಿಯನ್ನು ನುಂಗಿ ಉರಿಯುವ ಬತ್ತಿ ತನ್ನ ಕಷ್ಟವನ್ನು ಹೇಳುವುದಿಲ್ಲ. ಮನುಷ್ಯರಾದ ನಾವು ಆಕಸ್ಮಿಕವಾಗಿ ಈ ಜಗತ್ತಿಗೆ ಮಾನವರಾಗಿ ಬಂದಿದ್ದೇವೆ. ಜೀವಿತದ ಕಾಲಾವಧಿಯಲ್ಲಿ ಕಷ್ಟದಲ್ಲಿರುವ ಮಂದಿಗೆ ಸಹಾಯ ಮಾಡಬೇಕು. ಪ್ರಸಕ್ತ ಶೈಕ್ಷಣಿಕ ವರ್ಷ ಇನ್ನೂ ಆರಂಭವೇ ಆಗಿಲ್ಲ. ಇಡೀ ರಾಜ್ಯದ ಹಲವಾರು ಖಾಸಗಿ ಶಾಲಾ-ಕಾಲೇಜುಗಳಲ್ಲಿ ದುಡಿಯುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕ ವರ್ಗ ಸಂಬಳವಿಲ್ಲದೆ ಪರಿತಪಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ. ಕೊರೊನಾ ಹಾವಳಿಯಿಂದ ತತ್ತರಿಸಿರುವ ಖಾಸಗಿ ಶಾಲಾ-ಕಾಲೇಜುಗಳ ಉಪನ್ಯಾಸಕರಿಗೆ ಸರ್ಕಾರ ಗೌರವಧನ ನೀಡಬೇಕು. ಅವರ ಕುಟುಂಬಗಳಿಗೆ ಆಸರೆಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಬೆಳಕಿನ ಹಬ್ಬ ದೀಪಾವಳಿ ಆಚರಣೆಯಿಂದಲಾದರೂ ನಮ್ಮೆಲ್ಲರ ಬದುಕಿನಲ್ಲಿ ಕವಿದಿರುವ ಕೊರೊನಾ ಎಂಬ ಕರಿಮಾರಿ ಶೀಘ್ರದಲ್ಲೇ ಮರೆಯಾಗಿ ಎಲ್ಲರ ಬದುಕು ಮೊದಲಿನಂತಾಗಲಿ ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಿವಕುಮಾರ್, ಸತೀಶ್, ರವೀಂದ್ರ, ಮಣಿಕಂಠ, ಮರಿಸ್ವಾಮಿ, ಸದಾಶಿವ, ಮುನಿಸ್ವಾಮಿ, ನಾಗರಾಜ್, ಚೈತ್ರ, ರೇಖಾ, ರಮ್ಯಾ, ಭವ್ಯ, ಶಾಂತಕುಮಾರಿ, ದಿವ್ಯ ಮತ್ತು ಸಿಬ್ಬಂದಿಗಳಾದ ಗಂಗಮ್ಮ, ಲಕ್ಷ್ಮಿ, ಶ್ವೇತ ಮತ್ತಿತರರು ಪಾಲ್ಗೊಂಡಿದ್ದರು.