ಕಾಲೇಜುಗಳ ಆರಂಭ ಕ್ಲಾಸ್ ಇಲ್ಲ

ಬಳ್ಳಾರಿ, ನ.17: ಕಳೆದ 8 ತಿಂಗಳಿಂದ ಕೋವಿಡ್-19 ನಿಂದ ಮುಚ್ಚಿದ ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಕಾಲೇಜುಗಳು ಜಿಲ್ಲೆಯಲ್ಲಿ ಇಂದು ಆರಂಭಗೊಂಡಿವೆ. ಆದರೆ ತರಗತಿಗಳಲ್ಲಿ ಬೋಧನೆ ಮಾತ್ರ ನಡೆಯಲಿಲ್ಲ.
ಸರ್ಕಾರ ಇಂದಿನಿಂದ ಕಾಲೇಜುಗಳನ್ನು ಆರಂಭಿಸುವಂತೆ ಸಮ್ಮತಿ ನೀಡಿದೆ. ಆದರೆ ಅದಕ್ಕೆ ಬೇಕಾದ ಪೂರ್ವ ತಯಾರಿ ಕೊರತೆ ಎದ್ದು ಕಾಣುತ್ತಿದೆ.
ಕಾಲೇಜುಗಳಲ್ಲಿ ಸ್ಯಾನಿಟೈಜೇಷನ್ ಮಾಡಿದೆ. ಸಾಮಾಜಿಕ ಅಂತರದಲ್ಲಿ ಬೆಂಚುಗಳನ್ನು ಹಾಕಿದೆ. ಫೀವರ್ ಟೆಸ್ಟ್ ಸಹ ಮಾಡಲಾಗುತ್ತಿದೆ. ಆದರೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪೋಷಕರ ಅನುಮತಿ ಮತ್ತು ಕೋವಿಡ್ ಪರೀಕ್ಷಾ ವರದಿಯನ್ನು ತರಬೇಕು ಎಂಬ ಸರ್ಕಾರದ ನಿಯಮಕ್ಕೆ ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಪಡೆದುಕೊಂಡು ಬಂದಿದ್ದಾರೆ. ಆದರೆ ಕೋವಿಡ್ ಪರೀಕ್ಷೆ ವರದಿಗಾಗಿ ಪರದಾಟ ಮಾಡಬೇಕಿದೆ.
ಬಹುತೇಕ ಕಾಲೇಜುಗಳಲ್ಲಿ, ಕೋವಿಡ್ ಪರೀಕ್ಷೆ ವ್ಯವಸ್ಥೆ ಮಾಡದಿರುವ ಕಾರಣ ತಪಾಸಣಾ ಕೇಂದ್ರಗಳಿಗೆ ಇಂದು ವಿದ್ಯಾರ್ಥಿಗಳು ಪರದಾಡುತ್ತಿರುವುದನ್ನು ಕಾಣಬೇಕಾಯಿತು.
ಬಳ್ಳಾರಿ ನಗರದ ವಿಮ್ಸ್, ಶಾಂತಿ ಶಿಶುವಿಹಾರ ಶಾಲೆ, ಗಾಂಧಿನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲಾದೆಡೆ ಹೆಚ್ಚಿನ ಜನರಿದ್ದರಿಂದ ವಿದ್ಯಾರ್ಥಿಗಳ ಉದ್ದನೆ ಸಾಲಿನಲ್ಲಿ ಕಾಯಬೇಕಿತ್ತು. ಇನ್ನು ಱ್ಯಾಪಿಡ್ ಟೆಸ್ಟ್ ಅಲ್ಲದೆ ಪ್ರಯೋಗಾಲಯ ಪರೀಕ್ಷಾ ವರದಿಯೇ ಬೇಕೆಂದು ಹೇಳಲಾಗಿದೆ.
ಇಂದು ಪರೀಕ್ಷೆಗೆ ಶ್ಯಾಂಪಲ್ ನೀಡಿದರೂ ಅವುಗಳ ವರದಿ ಬರಲು ಇನ್ನು 3-4 ದಿನ ಬೇಕಾಗಬಹುದು. ಅಲ್ಲಿವರೆಗೆ ತರಗತಿಗೆ ಬರಲು ವಿದ್ಯಾರ್ಥಿಗಳಿಗೆ ಆಗುವುದಿಲ್ಲ. ಈ ಮಧ್ಯೆ ಇನ್ನು ಹಾಸ್ಟೆಲ್ ಗಳು ಆರಂಭವಾಗಿಲ್ಲ. ಬಸ್ ಗಳ ವ್ಯವಸ್ಥೆಯೂ ಇಲ್ಲ. ಹಳ್ಳಿಗಳಿಂದ ಬರಲು ಆದರೆ ಉಪನ್ಯಾಸಕರು ಮಾತ್ರ ಕೋವಿಡ್ ಪರೀಕ್ಷೆ ಮಾಡಿಕೊಂಡು ಭೋದನೆಗೆ ಸಿದ್ದರಾಗಿದ್ದಾರೆ.
ಬೇರೆಡೆಯಿಂದ
ಬೇರೆ ಕಾಲೇಜಿನಲ್ಲಿ ಕೋವಿಡ್ ಪರೀಕ್ಷೆ ಮಾಡುವ ವ್ಯವಸ್ಥೆ ಇಲ್ಲದ ಕಾರಣ ಸರ್ಕಾರಿ ಮತ್ತು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಸಹ ಸರಳಾದೇವಿ ಕಾಲೇಜಿಗೆ ಬಂದಿದ್ದರಿಂದ ಒಂದಿಷ್ಟು ಒತ್ತಡ ಹೆಚ್ಚಿತ್ತು.
ಆಸ್ಪತ್ರೆಗಳಿಗೆ ಹೋದರೂ ಅಲ್ಲಿ ಹೆಚ್ಚಿನ ಜನರಿದ್ದಾರೆ. ಕಾಲೇಜಿನವರನ್ನು ಕೇಳಿದರೆ ನಮಗೆ ಗೊತ್ತಿಲ್ಲ. ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎನ್ನುತ್ತಾರೆ. ನಮ್ಮ ಕಾಲೇಜಿನಲ್ಲಿ ಇಲ್ಲದ ಕಾರಣ ಇಲ್ಲಿಗೆ ಬರಬೇಕಾಯಿತು ಎಂದು ನಗರದ ಸರ್ಕಾರಿ ಪಾಲಿಟೆಕ್ನಿಕ್, ಸತ್ಯಂ ಕಾಲೇಜಿನ ವಿದ್ಯಾರ್ಥಿಗಳು ಹೇಳಿದರು.
ಸರಳಾದೇವಿ ಕಾಲೇಜಿನಲ್ಲಿನ ಉಪನ್ಯಾಸಕರು ಆಸಕ್ತಿ ತೆಗೆದುಕೊಂಡು ವಿದ್ಯಾರ್ಥಿಗಳ ಪರೀಕ್ಷೆ ಮಾಡಿಸುವುದು ಕಂಡುಬಂತು.
ಈಗ ಪರೀಕ್ಷೆ ನಡೆಸಿದೆ. ವರದಿ ಬಂದ ಮೇಲೆ ಅಂತಿಮ ವರ್ಷದ ತರಗತಿಗಳನ್ನು ಸದ್ಯ ಆರಂಭಿಸಲಿದೆ. ಇದರ ಸಾಧಕ-ಭಾದಕಗಳ ಮೇಲೆ ಸರ್ಕಾರದ ಮಾರ್ಗಸೂಚಿಯಂತೆ ಇನ್ನಿತರ ವಿದ್ಯಾರ್ಥಿಗಳ ಪರೀಕ್ಷೆ ತರಗತಿ ಆರಂಭಕ್ಕೆ ಚಿಂತಿಸಲಿದೆಂದು ಪ್ರಾಂಶುಪಾಲ ಹೇಮಣ್ಣ ಹೇಳಿದರು.

ಸರಳಾದೇವಿ ಕಾಲೇಜಿನಲ್ಲಿ ಮಾತ್ರ ಪರೀಕ್ಷೆ
ನಗರದ ಸರಳಾದೇವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾತ್ರ ಸಿದ್ಧ. ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲು ಸ್ವಾಬ್ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಕಾಲೇಜಿನ ಪ್ರಾಂಶುಪಾಲ ಎ.ಹೇಮಣ್ಣ ಅವರ ಬೇಡಿಕೆಯಲ್ಲಿ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಿದೆ.
ವಿದ್ಯಾರ್ಥಿಗಳು ಇಂದು ಬೆಳಿಗ್ಗೆ 9 ಗಂಟೆಗೆ ಬಂದರೂ ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರ 11 ಗಂಟೆಗೆ ಬಂದು ತಮ್ಮ ಕೆಲಸ ಆರಂಭಿಸಿದರು. ಅಲ್ಲಿವರೆಗೆ ವಿದ್ಯಾರ್ಥಿಗಳು ಕಾದುಕುಳಿತಿದ್ದರು.