ಕಾಲೇಜುಗಳಲ್ಲಿ ತರಗತಿ ನಡೆಸಿದರೆ ಆಡಳಿತ ಮಂಡಳಿಯೇ ಹೊಣೆ


ಮಂಗಳೂರು, ಎ.೨೩- ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ನಿರ್ದೇಶನದ ಪ್ರಕಾರ ಕಾಲೇಜುಗಳಲ್ಲಿ ತರಗತಿ ಅಥವಾ ಕೋಚಿಂಗ್ ಅಥವಾ ಹಾಸ್ಟೆಲ್‌ಗಳಲ್ಲಿ ಮಕ್ಕಳನ್ನು ಇರಿಸಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಆದರೆ ಕೆಲವೆಡೆ ಕಾಲೇಜುಗಳಲ್ಲಿ ತರಗತಿಗಳನ್ನು ನಡೆಸುತ್ತಿರುವ ಬಗ್ಗೆ ಪೋಷಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಂತಹ ಕೃತ್ಯ ನಡೆಯುತ್ತಿದ್ದರೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯನ್ನೇ ಹೊಣೆಯಾಗಿಸಲಾಗುವುದು ಎಂದು ದಕ್ಷಿಣ ಕನ್ನಡ ಪಿಯು ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಾಟ್ಸಾಪ್ ಸಂದೇಶದ ಮೂಲಕ ಕಾಲೇಜುಗಳಿಗೆ ಡಿಡಿಪಿಯು ಸೂಚನೆಯನ್ನೂ ನೀಡಿದ್ದಾರೆ. ಸರಕಾರದ ಆದೇಶದ ಪ್ರಕಾರ ಕಾಲೇಜುಗಳಲ್ಲಿ ತರಗತಿಗಳ ನಿರ್ಬಂಧದ ಅವಧಿಯಲ್ಲಿ ತರಗತಿ ಅವಧಿಯಲ್ಲಿ ಪ್ರಾಧ್ಯಾಪಕರು ಕಾಲೇಜಿನಲ್ಲಿದ್ದು, ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಬೇಕು. ಕೋವಿಡ್ ಕರ್ತವ್ಯಕ್ಕೆ ಹಾಜರಾಗುವ ಪ್ರಾಧ್ಯಾಪಕರು, ಉಪನ್ಯಾಸಕರನ್ನು ಇದರಿಂದ ಹೊರತುಪಡಿಸಲಾಗಿದೆ. ಹಾಗಿದ್ದೂ ಯಾವುದೇ ಕಾಲೇಜುಗಳಲ್ಲಿ ತರಗತಿಗಳನ್ನು ನಡೆಸಲು ಮುಂದಾದರೆ ಅಂತಹ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ವಿರುದ್ಧ ಜಿಲ್ಲಾಡಳಿತ ವಿಪತ್ತು ನಿರ್ವಹಣಾ ನಿಯಮದಡಿ ಕ್ರಮ ಕೈಗೊಳ್ಳಲಿದೆ ಎಂದು ಡಿಡಿಪಿಯು ತಿಳಿಸಿದ್ದಾರೆ.