ಕಾಲೇಜುಗಳತ್ತ ಸುಳಿಯದ ವಿದ್ಯಾರ್ಥಿಗಳು

ಬೆಂಗಳೂರು, ನ. ೨೧- ರಾಜ್ಯದಲ್ಲಿ ಪದವಿ ಕಾಲೇಜುಗಳು ಆರಂಭವಾಗಿ ನಾಲ್ಕು ದಿನಗಳು ಕಳೆದರೂ ವಿದ್ಯಾರ್ಥಿಗಳು ಮಾತ್ರ ಕಾಲೇಜುಗಳತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಕಾಲೇಜುಗಳ ಆರಂಭಕ್ಕೆ ಕೊರೊನಾ ನಡುವೆಯೇ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ರಾಜ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ಈ ತಿಂಗಳ ೧೭ ರಿಂದಲೇ ಬಾಗಿಲು ತೆರದಿದ್ದರೂ ಕಾಲೇಜಿಗೆ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಅತಿ ವಿರಳವಾಗಿದೆ.
ಪದವಿ ಕಾಲೇಜುಗಳಿಗೆ ಇದುವರೆಗೂ ಶೇ. ೨೦ ರಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ. ಉಳಿದವರು ಆನ್‌ಲೈನ್ ಮೊರೆ ಹೋಗಿದ್ದಾರೆ.
ಕೊರೊನಾ ಸೋಂಕು ಹರಡುವ ಭೀತಿಯಿಂದ ವಿದ್ಯಾರ್ಥಿಗಳು ಕಾಲೇಜುಗಳತ್ತ ಮುಖ ಮಾಡಿಲ್ಲ ಎಂದು ಹೇಳಲಾಗಿದೆ. ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ಕೊರೊನಾ ನೆಗೆಟಿವ್ ಇದ್ದವರಿಗೆ ಮಾತ್ರ ತರಗತಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ಸಹ ವಿದ್ಯಾರ್ಥಿಗಳು ಕಾಲೇಜಿಗೆ ಬಾರದಿರಲು ಕಾರಣ ಎನ್ನಲಾಗಿದೆ.
ಅನಗತ್ಯವಾಗಿ ರೋಗ ಲಕ್ಷಣಗಳಿಲ್ಲದಿದ್ದರೂ ಸೋಂಕು ಪರೀಕ್ಷೆಗೆ ಒಳಗಾಗಲು ಬಹುತೇಕ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇಷ್ಟವಿಲ್ಲ. ಹಾಗಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ
ರಾಜ್ಯದಲ್ಲಿ ಕಾಲೇಜು ಆರಂಭವಾದ ನಂತರ ವಿದ್ಯಾರ್ಥಿಗಳು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಇದುವರೆಗೂ ಬೆಂಗಳೂರಿನಲ್ಲೇ ೮೯ ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾಗಿದೆ. ಹಾಗೆಯೇ ಚಿತ್ರದುರ್ಗದಲ್ಲಿ-೧೬, ಉಡುಪಿ-೭, ಚಾಮರಾಜನಗರ-೧೦, ರಾಮನಗರ-೪, ಧಾರವಾಡ-೪, ಕೋಲಾರ-೨, ಬೆಳಗಾವಿ-೬ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಕೆಲವೆಡೆ ಉಪನ್ಯಾಸಕರು ಮತ್ತು ಕಾಲೇಜು ಸಿಬ್ಬಂದಿಗಳಿಗೂ ಸೋಂಕು ದೃಢಪಟ್ಟಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜುಗಳತ್ತ ಮುಖ ಮಾಡದೆ ಆನ್‌ಲೈನ್ ಕೋರ್ಸ್‌ಗಳಿಗೆ ಮೊರೆ ಹೋಗಿದ್ದಾರೆ.
ಕಾಲೇಜುಗಳು ಆರಂಭವಾದ ನಂತರ ತರಗತಿಗಳಿಗೆ ಹಾಜರಾದರೆ ಸೋಂಕು ಹರಡಬಹುದು ಎಂಬ ಭೀತಿ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ದೂರವಿರಿಸಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಕಾಲೇಜುಗಳನ್ನು ಆರಂಭಿಸಿತ್ತು. ಹರಿಯಾಣದಲ್ಲೂ ಕಾಲೇಜುಗಳು ಆರಂಭವಾದ ನಂತರ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ ಮತ್ತೆ ಕಾಲೇಜುಗಳನ್ನು ಬಂದ್ ಮಾಡುವ ತೀರ್ಮಾನ ಕೈಗೊಂಡಿದೆ.
ಮಹಾರಾಷ್ಟ್ರ ಸಹ ಶಾಲಾ-ಕಾಲೇಜುಗಳನ್ನು ಆರಂಭಿಸಲು ತೀರ್ಮಾನಿಸಿತ್ತು. ಈಗ ಏಕಾಏಕಿ ತಮ್ಮ ತೀರ್ಮಾನವನ್ನು ಮುಂದೂಡಿದೆ. ಹಾಗೆಯೇ ಗುಜರಾತ್ ಸರ್ಕಾರ ಸಹ ಕಾಲೇಜುಗಳ ಆರಂಭದ ತೀರ್ಮಾನವನ್ನು ಮುಂದೂಡಿದೆ. ಇಲ್ಲಿ ನವೆಂಬರ್ ೨೩ ರಿಂದ ಕಾಲೇಜುಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಶಾಲಾ-ಕಾಲೇಜುಗಳನ್ನು ಆರಂಭಿಸುವ ತೀರ್ಮಾನವನ್ನು ಮುಂದೂಡಿವೆ.
ರಾಜ್ಯ ಸರ್ಕಾರ ಈಗ ಸದ್ಯಕ್ಕೆ ಕಾಲೇಜುಗಳನ್ನು ಆರಂಭಿಸಿದೆ. ಶಾಲೆಗಳನ್ನು ಆರಂಭಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಕಾಲೇಜುಗಳಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸುವುದು ಸೂಕ್ತವೇ ಎಂಬುದು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ.