ಕಾಲು ನೋವಿಗೆ ಮನೆಮದ್ದು

ಕಾಲುನೋವು ಯಾವುದೇ ವಯಸ್ಸಿನ ವ್ಯಕ್ತಿಗಳಿಗೆ ಕಾಡಬಹುದಾದ ತೊಂದರೆಯಾಗಿದ್ದು ನಿಂತಾಗ, ನಡೆಯುವಾಗ ಎದುರಾಗುವ ಚಿಕ್ಕ ಪ್ರಮಾಣದ ನೋವಿನಿಂದ ನಿಲ್ಲಲೇ ಅಸಾಧ್ಯವಾಗುವಷ್ಟು ಪ್ರಬಲವೂ ಆಗಿರುತ್ತದೆ. ಕೆಲವೊಮ್ಮೆ ಒಂದೇ ಕಾಲಿಗೆ ನೋವು ಆವರಿಸಿದರೆ ಉಳಿದಂತೆ ಎರಡೂ ಕಾಲುಗಳಲ್ಲಿ ನೋವು ಇರುತ್ತದೆ. ಇದರಿಂದ ಚಲನವಲನ, ನಿತ್ಯ ಕಾರ್ಯಗಳಿಗೆ ಬಹಳಷ್ಟು ಅಡ್ಡಿಯಾಗುತ್ತದೆ. ಕಾಲುನೋವು ಎದುರಾಗಲು ಕೆಲವಾರು ಕಾರಣಗಳಿವೆ. ಕಾಲಿನ ಸ್ನಾಯುಗಳ ಸೆಡೆತ, ಕಾಲಿನ ಸೆಳೆತ, ಕಾಲಿನ ಸ್ನಾಯುಗಳ ಕ್ಷಮತೆ ಕುಸಿಯುವುದು, ಪೋಷಕಾಂಶಗಳ ಕೊರತೆ, ನಿರ್ಜಲೀಕರಣ, ಹೆಚ್ಚು ಹೊತ್ತು ನಿಂತೇ ಇರುವ ಪರಿಸ್ಥಿತಿ ಮೊದಲಾದವು ಕಾಲುನೋವಿಗೆ ಕಾರಣವಾಗಿವೆ. ಕೆಲವೊಮ್ಮೆ ಮಾನಸಿಕ ಒತ್ತಡ, ಮೂಳೆಯಲ್ಲಿ ಅತಿ ಚಿಕ್ಕದಾಗಿ ಬಿರುಕು ಬಂದಿರುವುದು, ಕೆಲವು ಔಷಧಿಗಳ ಅಡ್ಡಪರಿಣಾಮಗಳಿಂದಲೂ ಎದುರಾಗಬಹುದು.
ತಣ್ಣನೆಯ ಪಟ್ಟಿ: ಕೆಲವೊಮ್ಮೆ ಬಲುದೂರದ ನಡಿಗೆ ಅಥವಾ ಪ್ರಯಾಸದ ಕೆಲಸ ನಿರ್ವಹಿಸಿದ ಬಳಿಕ ಕಾಲುನೋವು ಎದುರಾಗುತ್ತದೆ ಹಾಗೂ ವಿಶ್ರಾಂತಿಯ ಬಳಿಕವೂ ಕಡಿಮೆಯಾಗದೇ ಇದ್ದರೆ ಇದರ ಪರಿಣಾಮವಾಗಿ ಕಾಲುಗಳಲ್ಲಿ ಸಂವೇದನೆ ಇಲ್ಲದೇ ಮರಗಟ್ಟಿದಂತಾಗಬಹುದು. ಈ ಭಾಗ ಕೊಂಚ ಊದಿಕೊಂಡಿರುತ್ತದೆ. ಇದಕ್ಕೆ ಅತಿಯಾದ ಸ್ನಾಯುಗಳ ಚಟುವಟಿಕೆಯಿಂದ ಉಂಟಾದ ಉರಿಯೂತವೇ ಕಾರಣ. ಈ ಊತವನ್ನು ಕಡಿಮೆ ಮಾಡಲು ಒಂದು ದಪ್ಪ ಟವೆಲ್ಲಿನೊಳಗೆ ಕೆಲವು ಮಂಜುಗಡ್ಡೆಯ ತುಂಡುಗಳನ್ನಿರಿಸಿ ಬಾವು ಬಂದ ಭಾಗದ ಮೇಲೆ ಸುಮಾರು ಹತ್ತು ಹದಿನೈದು ನಿಮಿಷ ಇರಿಸಿ. ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸಿ ಹಾಗೂ ಬಾವು ಪೂರ್ಣವಾಗಿ ಗುಣವಾಗುವವರೆಗೂ ವಿಶ್ರಾಂತಿ ಪಡೆಯಬೇಕು.
ಮಸಾಜ್: ಅತಿಯಾದ ವ್ಯಾಯಾಮ ಅಥವಾ ನಡಿಗೆಯಿಂದ ಸ್ನಾಯುಗಳ ಅಂಗಾಂಶ ತುಂಡಾಗುವುದರಿಂದ ಆಯಾಸದಿಂದಾಗಿ ಕಾಲುನೋವು ಎದುರಾಗಿದ್ದರೆ ನೋವಿರುವ ಭಾಗದಲ್ಲಿ ಮಸಾಜ್ ಮಾಡಿದಾಗ ಈ ಭಾಗದಲ್ಲಿ ರಕ್ತಪರಿಚಲನೆ ಉತ್ತಮಗೊಂಡು ಶೀಘ್ರವೇ ನೋವು ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಈ ಮಸಾಜ್ ಗೆ ಉತ್ತಮ ಆಯ್ಕೆಯಾಗಿದೆ. ದಿನಕ್ಕೆ ಮೂರು ಬಾರಿಯಂತೆ ಸುಮಾರು ಹತ್ತು ನಿಮಿಷಗಳ ಕಾಲ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ಮಸಾಜ್ ಮಾಡಬೇಕು.
ಅರಿಶಿನ: ಒಂದು ವೇಳೆ ನೋವು ಉಂಟಾಗಿದ್ದ ಭಾಗದಲ್ಲಿ ಚರ್ಮ ಕೆಂಪಗಾಗಿದ್ದರೆ ಅರಿಶಿನ ಉತ್ತಮ ಆಯ್ಕೆಯಾಗಿದ್ದು ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಉರಿಯೂತ ನಿವಾರಕ ಗುಣ ನೋವು ಕಡಿಮೆಯಾಗಲು ನೆರವಾಗುತ್ತವೆ. ಇದಕ್ಕಾಗಿ ತಲಾ ಒಂದು ಚಿಕ್ಕ ಚಮಚ ಅರಿಶಿನ ಪುಡಿಯನ್ನು ಉಗುರು ಬೆಚ್ಚಗಾಗಿಸಿದ ಎಳ್ಳೆಣ್ಣೆಯಲ್ಲಿ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ನೋವು ಉಂಟಾಗಿರುವ ಭಾಗಕ್ಕೆ ತೆಳ್ಳಗೆ ಹಚ್ಚಿ ಅರ್ಧ ಗಂಟೆ ಬಿಡಿ ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸಿ.
ಹಸಿಶುಂಠಿ: ಇದರ ಉರಿಯೂತ ನಿವಾರಕ ಗುಣ ಕಾಲುಗಳ ಭಾಗದಲ್ಲಿ ರಕ್ತಪರಿಚಲನೆ ಹೆಚ್ಚಿಸುವ ಮೂಲಕ ಉರಿಯೂತದಿಂದ ಉಂಟಾಗಿದ್ದ ಕಾಲುನೋವನ್ನು ಕಡಿಮೆಗೊಳಿಸುತ್ತದೆ. ಇದಕ್ಕಾಗಿ ಹಸಿಶುಂಠಿ ಬೆರೆಸಿ ತಯಾರಿಸಿದ ಬಿಸಿ ಬಿಸಿ ಟೀ ದಿನಕ್ಕೆ ಮೂರು ಬಾರಿ ಸೇವಿಸಿ.
ಲಿಂಬೆ: ಇದರಲ್ಲಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ಕಾಲುನೋವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇದಕ್ಕಾಗಿ ಒಂದು ಲಿಂಬೆಯ ರಸವನ್ನು ಹಿಂಡಿ ಒಂದು ಕಪ್ ಉಗುರು ಬೆಚ್ಚನೆಯ ನೀರಿನಲ್ಲಿ ಬೆರೆಸಿ ಒಂದು ಚಿಕ್ಕ ಚಮಚ ಜೇನು ಕದಡಿ ದಿನಕ್ಕೆರಡು ಬಾರಿ ಸೇವಿಸಿ.
ವಿಟಮಿನ್ ಡಿ: ಕೆಲವೊಮ್ಮೆ ವಿಟಮಿನ್ ಡಿ ಕೊರತೆಯಿಂದಲೂ ಕಾಲುನೋವು ಹಾಗೂ ವಿಶೇಷವಾಗಿ ತೊಡೆಭಾಗದಲ್ಲಿ ನೋವು ಎದುರಾಗಬಹುದು. ವಿಟಮಿನ್ ಡಿ ನಮ್ಮ ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಹಾಗೂ ಗಂಧಕಗಳನ್ನು ನಿಯಂತ್ರಿಸಲು ಅಗತ್ಯವಾಗಿದೆ ಹಾಗೂ ಸ್ನಾಯುಗಳ ಕಾರ್ಯನಿರ್ವಹಣೆಗೂ ಇವೆರಡು ಖನಿಜಗಳ ಅಗತ್ಯವಿದೆ. ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಮುಂಜಾನೆಯ ಎಳೆಬಿಸಿಲು ದೇಹದ ಮೇಲೆ ಬೀಳುವಂತೆ ಕನಿಷ್ಟ ಹತ್ತರಿಂದ ಹದಿನೈದು ನಿಮಿಷಗಳಾದರೂ ನಡೆದಾಡಬೇಕು.
ಪೊಟ್ಯಾಶಿಯಂ: ದೇಹದಲ್ಲಿ ಪೊಟ್ಯಾಶಿಯಿಂ ಕೊರತೆ ಎದುರಾದರೂ ಕಾಲುನೋವು ಉಲ್ಬಣಗೊಳಿಸುತ್ತದೆ. ಏಕೆಂದರೆ ಸ್ನಾಯು ಹಾಗೂ ನರಗಳ ಕಾರ್ಯನಿರ್ವಹಣೆಗೆ ಪೊಟ್ಯಾಶಿಯಂ ಅಗತ್ಯವಾದ ಖನಿಜವಾಗಿದೆ. ಒಂದು ವೇಳೆ ನಿಂತ ತಕ್ಷಣವೇ ಧುತ್ತನೆ ಸ್ನಾಯುಗಳಲ್ಲಿ ನೋವು ಎದುರಾದರೆ ಇದು ಪೊಟ್ಯಾಶಿಯಂ ಕೊರತೆ ಎಂದು ತಿಳಿದುಕೊಳ್ಳಬಹುದು. ಇದಕ್ಕಾಗಿ ಪೊಟ್ಯಾಶಿಯಂ ಹೆಚ್ಚಿರುವ ಬಾಳೆಹಣ್ಣು, ಪ್ಲಮ್, ಒಣದ್ರಾಕ್ಷಿ, ಟೊಮೆಟೋ ರಸ ಹಾಗೂ ಬೇಯಿಸಿದ ಆಲುಗಡ್ಡೆಗಳನ್ನು ಸೇವಿಸಿದರೆ ಸಾಕು.
ಬಟ್ಟೆಯ ಶಾಖ: ಒಣ ಹಾಗೂ ದಪ್ಪನೆಯ ಹತ್ತಿಯ ಬಟ್ಟೆಯನ್ನು ಇಸ್ತ್ರಿ ಪೆಟ್ಟಿಗೆ ಉಪಯೋಗಿಸಿ ಸಾಕಷ್ಟು ಬಿಸಿಯಾಗಿಸಿ ನೋವಿರುವ ಭಾಗದ ಮೇಲೆ ನವಿರಾಗಿ ಒತ್ತಿ ನೋವಿರುವ ಭಾಗದ ಮೇಲೆ ಶಾಖ ನೀಡುವ ಮೂಲಕವೂ ನೋವು ಕಡಿಮೆ ಮಾಡಬಹುದು. ದಿನಕ್ಕೆರಡು ಬಾರಿ ಈ ವಿಧಾನವನ್ನು ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನಿರ್ವಹಿಸಬೇಕು.