ಕಾಲುವೆ ನೀರಿಗಾಗಿ ಬಿಜೆಪಿ ನೇತೃತ್ವದಲ್ಲಿ ರೈತರಿಂದ ಪ್ರತಿಭಟನೆ

ಸಿರವಾರ ಆ೧೪: ಪಟ್ಟಣದ ಮಾನ್ವಿ ಕ್ರಾಸ್ ನಲ್ಲಿ ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪ್ರತಿವರ್ಷವೂ ಕೆಳಭಾಗದ ರೈತರ ನೀರಿನ ಬವಣೆ ತಪ್ಪಿದ್ದಲ್ಲ. ಮಳೆಗಾಲದಲ್ಲೂ ಸಹ ನೀರಿನ ನಿರ್ವಹಣೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಸ್ಥಳೀಯರಾದ ಸಚಿವ ಎನ್ ಎಸ್ ಭೋಸರಾಜು ಹಾಗು ಶಾಸಕ ಜಿ.ಹಂಪಯ್ಯ ನಾಯಕ ಅವರು ಇಚ್ಛಾಶಕ್ತಿ ಪ್ರದರ್ಶಿಸಿ ರೈತರಿಗೆ ಸಮರ್ಪಕವಾಗಿ ನೀರನ್ನು ಒದಗಿಸಬೇಕು. ಅಧಿಕಾರಿ ಗಳು ಸೆಕ್ಷನ್ ೧೪೪ ಹಾಕಿಸಿ ಕೆಳಭಾಗಕ್ಕೆ ನೀರು ತಲುಪಿಸಲು ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ನೀರಾವರಿ ಇಲಾಖೆಯ ಎಸ್ ಇ ಅವರು ಭೇಟಿ ನೀಡಿ ಆ೧೬ ರ ಐಸಿಸಿ ಸಭೆಯಲ್ಲಿ ಸಮಸ್ಯೆಯ ಬಗ್ಗೆ ಚರ್ಚಿಸಲಾಗುವುದು. ಆ೧೬ ರ ನಂತರ ನೀರಿನ ಗೇಜ್ ಅನ್ನು ಕಾಯ್ದುಕೊಳ್ಳಲಾಗುವುದು, ಕೆಳಭಾಗದ ಕಾಲುವೆಗಳಿಗೆ ನೀರನ್ನು ಹರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಯನ್ನು ಹಿಂದಕ್ಕೆ ಪಡೆಯಲಾಯಿತು.
ರಸ್ತೆ ತಡೆ ವಾಹನ ಸಂಚಾರ ಅಸ್ತವ್ಯಸ್ತ: ನೂರಾರು ಸಂಖ್ಯೆಯಲ್ಲಿ ಸೇರಿದ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ಸೋಮವಾರ ಸಂತೆ ದಿನವಾದ್ದರಿಂದ ವಿವಿದೆಡೆಗಳಿಂದ ಆಗಮಿಸಿದ್ದ ಜನರಿಗೆ ತೊಂದರೆಯುಂಟಾಯಿತು.