ಕಾಲುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ


ಬ್ಯಾಡಗಿ,ಮಾ.4: ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿಯೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಮುಖ್ಯವಾಗಿ ಸ್ಮಶಾನ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.

ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಭೂಸೇನಾ ನಿಗಮದ ವತಿಯಿಂದ 20ಲಕ್ಷ ರೂಗಳಲ್ಲಿ ಎಸ್ಸಿ ಕಾಲೋನಿಯಲ್ಲಿ ಕೈಗೆತ್ತಿಕೊಂಡಿರುವ ಕಾಂಕ್ರೀಟ್ ಕಾಲುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್ ಮತ್ತು ಅತಿವೃಷ್ಟಿಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೂ ಸಹ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಹಿನ್ನಡೆಯಾಗಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 118ಗ್ರಾಮಗಳಲ್ಲೂ ಸಮಗ್ರ ಅಭಿವೃದ್ಧಿಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ತಾವು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಸಹದೇವಪ್ಪ ಬನ್ನಿಹಳ್ಳಿ ವಹಿಸಿದ್ದರು. ಮುಖಂಡರಾದ ವೀರೇಂದ್ರ ಶೆಟ್ಟರ, ವಿಷ್ಣುಕಾಂತ ಬೆನ್ನೂರ, ವಿನಯ್ ಹಿರೇಮಠ, ಶೇಖಪ್ಪ ಕಲ್ಮನಿ, ಗ್ರಾಪಂ ಸದಸ್ಯರಾದ ಈರಣ್ಣ ಅಗಸಿಬಾಗಿಲ, ಹನುಮಂತಪ್ಪ ಹೊನ್ನಮ್ಮನವರ, ಗಿರಿಜಮ್ಮ ಅಂಬಲಿ, ಅಕ್ಕಮ್ಮ ಶಿಡೇನೂರ, ಮಂಗಳಾ ಕಮ್ಮಾರ,
ಮಂಜಪ್ಪ ಮುದಿಯಮ್ಮನವರ, ನಿರ್ಮಲಾ ಹೆಗ್ಗೇರಿ, ಅಕ್ಕಮ್ಮ ಲಿಂಗದಹಳ್ಳಿ ನಾಗಮ್ಮ ಆನ್ವೇರಿ, ಮಾಲತೇಶ ಅಡ್ಮನಿ, ಪಿಡಿಓ ಜಗದೀಶ ಮಣ್ಣಮ್ಮನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.