ಕಾಲುವೆ ಒಡೆದ ಸ್ಥಳಕ್ಕೆ ಶಾಸಕ ನಾಡಗೌಡ ಭೇಟಿ ಪರಿಶೀಲನೆ

ಮುದ್ದೇಬಿಹಾಳ; ಆ.12:ತಾಲೂಕಿನ ಹರಿಂದ್ರಾಳ ಗ್ರಾಮದ ಸಮೀಪ ಹಾದು ಹೋಗಿರುವ ಚಿಮ್ಮಲಗಿ ಏತ ನೀರಾವರಿ ಎ.ಎಲ್.ಬಿ.ಸಿ ಕಾಲುವೆ ಒಡೆದು ಅಪಾರ ಪ್ರಮಾಣದಲ್ಲಿ ರೈತರ ಹೊಲಗಳಿಗೆ ನೀರು ನುಗ್ಗಿ ಹಾನಿಯಾದ ಕಾರಣಕ್ಕೆ ಶಾಸಕ ಅಪ್ಪಾಜಿ ಸಿ.ಎಸ್ ನಾಡಗೌಡ ಅವರು ಕಾಲುವೆ ಒಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುದ್ದಿ ತಿಳಿಯುತ್ತಿದ್ದಂತೆಯೆ ಬೆಂಗಳೂರಿನಿಂದ ಬಂದ ಶಾಸಕ ಸಿ.ಎಸ್ ನಾಡಗೌಡ ರೈತರ ಹೊಲಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಚಿಮ್ಮಲಗಿ ಎ.ಎಲ್.ಬಿ.ಸಿ ಕಾಲುವೆಗೆ ಅಧಿಕಾರಿಗಳು ಈವರೆಗೂ ನೀರು ಬಿಟ್ಟಿರಲಿಲ್ಲ. ರೈತರ ಬೆಳೆಗಳು ಒಣಗುತ್ತಿರುವ ಹಾಗೂ ರೈತರ ಒತ್ತಡ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಹೇಳಿ ಕಾಲುವೆಗೆ ನೀರು ಹರಿಸಿದ್ದೇವು. ಆದರೆ ರೈತರು ಕಾಲುವೆ ಅಗೆದು ತಮ್ಮ ಜಮೀನುಗಳಿಗೆ ಪೈಪ್ ಲೈನ್ ಮಾಡಿರುವುದು ಕಾಲುವೆ ಒಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು.

ರೈತರು ಕಾಲುವೆ ಮೂಲಕ ತಮ್ಮ ಜಮೀನುಗಳಿಗೆ ಪೈಪ್ ಲೈನ್ ಮಾಡಿದರೆ ಕಾಲುವೆ ಒಡೆಯುತ್ತದೆ. ಹೀಗಾಗಿ ರೈತರು ಪೈಪ್ ಲೈನ್ ಕಾಲುವೆ ಮೇಲೆ ಅಳವಡಿಸಿದರೆ ಯಾವುದೇ ರೀತಿಯಲ್ಲಿ ಕಾಲುವೆಗೆ ಧಕ್ಕೆಯಾಗುವುದಿಲ್ಲ. ಕಾಲುವೆ ಒಡೆದ ಕಾರಣಕ್ಕೆ ಇದರ ಮೇಲೆ ಅವಲಂಬಿತವಾಗಿ ಮೆಣಸಿನಕಾಯಿ ಇನ್ನೀತರ ಬೆಳೆ ಬೆಳೆದ ಸುಮಾರು 25000 ಹೆಕ್ಟೇರ್ ಭೂಮಿಗೆ ನೀರು ಇಲದಂತಾಗಿದೆ. ಹೀಗಾಗಿ ರೈತರು ಮನದಟ್ಟು ಮಾಡಿಕೊಂಡು ಕಾಲುವೆ ಒಡೆದು ಕೆಳಗಡೆ ಪೈಪ್ ಲೈನ್ ಮಾಡುವುದನ್ನ ಬಿಟ್ಟು ಕಾನೂನು ಪ್ರಕಾರ ಅಳವಡಿಕೆ ಮಾಡಬೇಕೆಂದರು.

ರೈತರು ತಮ್ಮ ಬೆಳೆಗಳನ್ನು ಬೆಳೆಸಲು ನೀರು ಬಹುಮುಖ್ಯ. ಹೀಗಾಗಿ ನೀರು ಹರಿಯುವ ಕಾಲುವೆಗಳನ್ನು ತಮ್ಮ ಆಸ್ತಿಯಂತೆ ಇವುಗಳನ್ನು ಕಾಪಾಡಿಕೊಳ್ಳಬೇಕು. ಈ ರೀತಿ ಕಾಲುವೆ ಒಡೆದು ಪೈಪ್ ಲೈನ್ ಮಾಡಿದರೆ ನಮ್ಮ ಆಸ್ತಿಗಳೇ ಹಾಳು ಆಗುತ್ತವೆ. ಕೆಲವು ರೈತರು ಮಾಡಿದ ತಪ್ಪುಗಳಿಗೆ ಕಾಲುವೆ ಸುತ್ತಮುತ್ತಲಿನ ಭಾಗದ ರೈತರು ಬೆಳೆಗಳಿಗೆ ನೀರು ಇಲ್ಲದೆ ಅನುಭವಿಸಬೇಕಾಗಿದೆ ಎಂದರು. ಈ ವೇಳೆ ಕಾಲುವೆ ಕೊರೆದ ಪೈಪ್ ಲೈನ್ ಮಾಡಿದ ರೈತನಿಗೆ ಈ ರೀತಿಯಲ್ಲಿ ಅಗೆದು ಪೈಪ್ ಲೈನ್ ಅಳವಡಿಕೆ ಮಾಡಬಾರದು. ಇದರಿಂದ ಇನ್ನೂಳಿದ ರೈತರಿಗೆ ನೀರು ಇಲ್ಲದೇ ತೊಂದರೆಯಾಗುತ್ತದೆ ಎಂದು ಶಾಸಕರು ಹೇಳಿದರು.

ಜನರ ಪ್ರತಿನಿಧಿಯಾಗಿ ಈಗಾಗಲೇ ಕಾಲುವೆ ಒಡೆದ ಬಗ್ಗೆ ಅಧಿಕಾರಿಗಳಿಗೆ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ಅಧಿಕಾರಿ ಅಥವಾ ಯಾರೇ ಆಗಲಿ ಈ ರೀತಿ ಹಾನಿಯಾಗಲು ಕಾರಣರಾದವರಿಗೆ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಕಾಲುವೆ ಒಡೆದು ಪೈಪ್ ಲೈನ್ ಮಾಡಿರುವುದು ಎಲ್ಲಾದರೂ ಕಂಡುಬಂದರೆ ಆ ತಕ್ಷಣವೇ ಅವುಗಳನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಸಿ.ಎಸ್ ನಾಡಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ನಾಡಗೌಡರಿಗೆ ಕಾಲುವೆ ಒಡೆದ ಬಗ್ಗೆ ಎ ಎಲ್ ಬಿಸಿ ಕಾಲುವೆಯ ಇಇ ರಾಮನಗೌಡ ಹಳ್ಳೂರು ಮಾತನಾಡಿ, ಕಾಲುವೆಗೆ ಹಾಕಿದ ಕಾಂಕ್ರೀಟ್ ಕೊರೆದು ಹೊಲಗಳಿಗೆ ಪೈಪ್ ಲೈನ್ ಮಾಡಿಕೊಂಡಿರುವುದು ಕಾಲುವೆ ಒಡೆಯಲು ಕಾರಣವಾಗಿದೆ ಎಂದರು. ಸ್ಥಳದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಇದ್ದರು.